ಲೈಂಗಿಕ ಅಲ್ಪಸಂಖ್ಯಾತರ ಅವಹೇಳನ ಸಲ್ಲ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 31
ಲೈಂಗಿಕ ಅಲ್ಪಸಂಖ್ಯಾತರು ಸಮಾಜದ ಅವಿಭಾಜ್ಯ ಅಂಗ. ಅವರಿಗೆ ಮಾನಸಿಕ ಹಿಂಸೆ ನೀಡುವುದು, ಅವಹೇಳನ ಮಾಡುವುದು ಹಾಗೂ ನಿಂದಿಸುವುದು ಸರಿಯಲ್ಲ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್. ಸಾವಿತ್ರಿ ವಿನಾಯಕ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ಶುಕ್ರವಾರ ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಲೈಂಗಿಕ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವುದರಿಂದಲೇ ಅವರು ಜೀವನ ನಿರ್ವಹಣೆಗೆ ಭಿಕ್ಷಾಟನೆ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಶೇ. 17ರಷ್ಟು ಲೈಂಗಿಕ ಅಲ್ಪಸಂಖ್ಯಾತರು ಏಡ್ಸ್ ರೋಗಕ್ಕೆ ಬಲಿಯಾಗಿ ಮರಣ ಹೊಂದುತ್ತಿರುವುದು ದುರಂತದ ಸಂಗತಿ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಗಳಿಗಿರುವ ಹಕ್ಕುಗಳೇ ಲೈಂಗಿಕ ಅಲ್ಪಸಂಖ್ಯಾತರಿಗೂ ಅನ್ವಯಸುತ್ತವೆ. ಅವುಗಳನ್ನು ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಅಲ್ಲದೇ, ಇತರರಿಗೆ ಮುಜುಗರ ಉಂಟು ಮಾಡುವ ಹಾವ-ಭಾವಗಳನ್ನು ನಿಲ್ಲಿಸಬೇಕು ಎಂದು ಸಲಹೆ ಮಾಡಿದರು. ಲೈಂಗಿಕ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧ ಹಕ್ಕುಗಳಿವೆ. ಅವು ಸರ್ಕಾರಗಳ ನಿರ್ಲಕ್ಷ್ಯದಿಂದ ಸರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಸರ್ವ ಸಮಸ್ಯೆಗಳಿಗೂ ಶಿಕ್ಷಣವೇ ಮದ್ದು. ಈ ಹಿನ್ನೆಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಸಂಘಟಿಕರಾಗಿ ಅಕ್ಷರ ಜ್ಞಾನ ಪಡೆದುಕೊಳ್ಳಬೇಕು. ಅಲ್ಲದೇ ಆರ್ಥಿಕವಾಗಿ ಸಬಲರಾಗಿ ಉನ್ನತ ಮಟ್ಟದ ಸಾಧನೆಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎ. ಹುದ್ದಾರ ಮಾತನಾಡಿ, ಸಮಾಜದಲ್ಲಿ ಎಲ್ಲ ಜೀವಿಗಳಿಗೆ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ಒದಗಿಸಿಕೊಡಲು ಶ್ರಮಿಸಬೇಕು. ಅದರಂತೆ ಸರ್ಕಾರ ಸಹ ಲೈಂಗಿಕ ಅಲ್ಪಸಂಖ್ಯಾತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಲ್ಲಾ ಆರೋಗ್ಯ ಅಧಿಕಾರಿ ರಾಘವೇಂದ್ರಸ್ವಾಮಿ, ನ್ಯಾಯಾಧೀಶ ಚನ್ನಕೇಶವ, ಬೆಂಗಳೂರಿನ ಸಂಘಂ ಸಂಸ್ಥೆಯ ಲೈಂಗಿಕ ಅಲ್ಪಸಂಖ್ಯಾತೆ ಅಕಾಯಿ ಪದ್ಮಸಾಲಿ ಇತರರಿದ್ದರು.
ದೇಶದ ಪ್ರತಿಯೊಬ್ಬ ಪ್ರಜೆಗಳಿಗಿರುವ ಹಕ್ಕುಗಳೇ ಲೈಂಗಿಕ ಅಲ್ಪಸಂಖ್ಯಾತರಿಗೂ ಅನ್ವಯಸುತ್ತವೆ. ಅವುಗಳನ್ನು ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಇತರರಿಗೆ ಮುಜುಗರ ಉಂಟು ಮಾಡುವ ಹಾವ-ಭಾವಗಳನ್ನು ನಿಲ್ಲಿಸಬೇಕು. ಲೈಂಗಿಕ ಅಲ್ಪಸಖ್ಯಾತರಿಗೆ ಸಂವಿಧಾನಬದ್ಧ ಹಕ್ಕುಗಳಿವೆ. ಅವುಗಳು ಸರ್ಕಾರಗಳ ನಿರ್ಲಕ್ಷ್ಯದಿಂದ ಅನುಷ್ಠಾನಕ್ಕೆ ಬರುತ್ತಿಲ್ಲ.
- ನ್ಯಾ. ಸಾವಿತ್ರಿ ವಿನಾಯಕ