ಕಳಪೆ ಕಾಮಗಾರಿ: ರಸ್ತೆ ಸಂಪೂರ್ಣ ಹಾಳು
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜು. 7
ತಾಲೂಕಿನ ಹಾವಣಗಿ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ ಸಂಪೂರ್ಣ ಕಳಪೆಯಿಂದ ಕೂಡಿದ್ದು, ರಸ್ತೆ ನಿರ್ಮಿಸಿದ ಕೆಲವೆ ತಿಂಗಳಲ್ಲಿ ಕಿತ್ತಿದೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಘಟಕ ಯೋಜನೆಯಡಿ ಒಟ್ಟು ರು. 70 ಲಕ್ಷ ವೆಚ್ಚದಲ್ಲಿ 815 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಕಾಮಗಾರಿ ನಡೆದ ಸಂದರ್ಭದಲ್ಲಿ ಗುತ್ತಿಗೆದಾರರು ಸಮರ್ಪಕ ಪ್ರಮಾಣದಲ್ಲಿ ಕ್ಯುರಿಂಗ್ ಹಾಗೂ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ರಸ್ತೆಯ ಮೇಲ್ಪದರು ನಿಧಾನ ಕಿಳಲಾರಂಭಿಸಿದೆ. ರಸ್ತೆಯ ಕೆಲವೆಡೆ ಭಾರಿ ಗಾತ್ರದ ಗುಂಡಿಗಳು ಬಿದ್ದಿದ್ದು, ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ, ಗ್ರಾಪಂ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ರಸ್ತೆಯ ಎರಡೂ ಬದಿಯಲ್ಲಿ ಪಕ್ಕಾ ಗಟಾರು ನಿರ್ಮಿಸಬೇಕಿದ್ದ ಗುತ್ತಿಗೆದಾರರು ಅಲ್ಲಲ್ಲಿ ಗಟಾರು ನಿರ್ಮಾಣವನ್ನೇ ಕೈಬಿಟ್ಟಿದ್ದಾರೆ. ಇದರಿಂದ ಚರಂಡಿ ನೀರು ಹರಿದು ರಸ್ತೆಗೆ ಬಂದು ಸೇರುತ್ತಿದೆ. ಸುಮಾರು 200-250 ಮೀಟರ್ಗಳಷ್ಟು ಪಕ್ಕಾ ಗಟಾರು ನಿರ್ಮಾಣ ಮಾಡಲಾಗಿಲ್ಲ. ಪರಿಣಾಮ ಚರಂಡಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಮಳೆಗಾಲದಲ್ಲಿ ರಸ್ತೆ ಸಂಚಾರ ತೀವ್ರ ಅಡಚಣೆ ಉಂಟಾಗಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಕಳಪೆ ಕಾಮಗಾರಿ ಕುರಿತು ಗ್ರಾಮಸ್ಥರು ಕಾಮಗಾರಿ ನಡೆದ ಸಂದರ್ಭದಲ್ಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಗಟಾರಿಲ್ಲದೆ ಚರಂಡಿ ನೀರು ಸಮರ್ಪಕವಾಗಿ ಹರಿಯದ ಹಿನ್ನೆಲೆಯಲ್ಲಿ ಇದೀಗ ತಾಪಂ ಅನುದಾನದಲ್ಲಿ ಗಟಾರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಳಪೆ ಗುಣಮಟ್ಟ ಜತೆಗೆ ಅಪೂರ್ಣ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.