ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಗರ್ ಹುಕುಂ ಸಾಗುವಳಿ ಪತ್ರ ನೀಡಿ

Vishwanath S
Updated On : 8 Jul 2014, 11:09 am

ಬ್ಯಾಡಗಿ: ಬಗರ್ ಹುಕುಂ ಸಾಗುವಳಿ ಮಾಡಿರುವ ಭೂರಹಿತ ಬಡ ರೈತರಿಗೆ ಸಾಗುವಳಿ ಪತ್ರಗಳನ್ನು ಕೂಡಲೇ ವಿತರಿಸುವಂತೆ ಆಗ್ರಹಿಸಿ ಸೋಮವಾರ ಬಹುಜನ ಸಮಾಜ ಪಕ್ಷ ತಾಲೂಕು ಘಟಕದ ನೇತೃತ್ವದಲ್ಲಿ ಭೂರಹಿತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಳೇ ಪುರಸಭೆಯಿಂದ ಮೆರವಣಿಗೆ ಮೂಲಕ ಸಾಗಿದ ನೂರಾರು ರೈತರು ಮುಖ್ಯರಸ್ತೆ, ಸುಭಾಸ್ ವೃತ್ತ, ಸ್ಟೇಷನ್ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿ ತಲುಪಿದರು. ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅನುಚ್ಛೇದ ಆಶಯ ಮಣ್ಣುಪಾಲು: ಅಧ್ಯಕ್ಷ ರುದ್ರಯ್ಯ ಸಾಲಿಮಠ ಮಾತನಾಡಿ, ಸಂವಿಧಾನದ ಅನುಚ್ಛೇದ 38 ಮತ್ತು 39ರಂತೆ ಭೂಮಿ, ಬಂಡವಾಳ, ಉದ್ಯೋಗ ಇವುಗಳು ಕೆಲವೇ ವ್ಯಕ್ತಿಗಳ ಕೈವಶವಾಗದೆ ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪುವಂತೆ ಕಾನೂನು ರಚಿಸುವಂತೆ ಸೂಚಿಸುತ್ತದೆ, ಆದರೆ 6 ದಶಕಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ಕುಟುಂಬ ಹಾಗೂ ಸ್ವಾರ್ಥ ರಾಜಕಾರಣದಲ್ಲಿ ತೊಡಗಿದ್ದು, ಈ ಆಶಯಗಳನ್ನು ಮಣ್ಣುಪಾಲು ಮಾಡಿವೆ ಎಂದು ಆರೋಪಿಸಿದರು. ಹಿಂದುಳಿದವರು, ಮೇಲ್ಜಾತಿ ಬಡವರು ಹಾಗೂ ಭೂರಹಿತ ಕುಟುಂಬಗಳು ಬಡತನದಲ್ಲೇ ಹುಟ್ಟಿ, ಸಾಯುತ್ತಿವೆ. ಕೆಲವು ಕುಟುಂಬಗಳು 20 ವರ್ಷಗಳಿಂದ ಸರ್ಕಾರಿ ಜಮೀನು ಅಷ್ಟಿಷ್ಟು ಒತ್ತುವರಿ ಮಾಡಿಕೊಂಡು ಕೃಷಿ ನಡೆಸುತ್ತಿದ್ದು, ಸಕ್ರಮಗೊಳಿಸುವಂತೆ ಕಾಯುತ್ತಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಹ್ಮಣಿಯಂ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, 2011ರ ವರದಿಯಂತೆ 12ರಿಂದ 15 ಲಕ್ಷ ಎಕರೆ ಸರ್ಕಾರಿ ಜಮೀನಿನಲ್ಲಿ ಬಡ ರೈತರು ಬಗರ್ ಹುಕುಂ ಸಾಗುವಳಿ ಮಾಡಿದ್ದಾರೆ. ಇದರಲ್ಲಿ ಭೂ ಮಾಫಿಯಾ, ಪ್ಲಾಂಟರ್‌ಗಳು, ರಿಯಲ್ ಎಸ್ಟೇಟ್ ಮಾಲೀಕರೂ ಸೇರಿದ್ದಾರೆ. ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದ ಭೂರಹಿತರಿಗೆ ಸರ್ಕಾರ ಕೂಡಲೇ  ಭೂಮಿ ಹಂಚಿಕೆ ಮಾಡುವಂತೆ ಆಗ್ರಹಿಸಿದರು. ತಿರುಕಪ್ಪ ತಳವಾರ, ಫಕ್ಕೀರೇಶ ಡಂಬಳ, ಶಿವಪ್ಪ ನಂದಿಹಳ್ಳಿ, ಮೈಲಾರೆಪ್ಪ ದೇಸೂರ. ಗುಡ್ಡಪ್ಪ ಭಾವಾಪುರಿ, ಗುಡ್ಡಪ್ಪ ಚೌಟಿ, ರತ್ನವ್ವ ಲಿಂಗದಳ್ಳಿ, ರೇಣುಕಾ ಕಾಕೋಳ, ಮಲ್ಲವ್ವ ಹಾದಿಮನಿ, ಜಯವ್ವ ಹೊಸೂರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement