ವರುಣನ ಕೃಪೆಗಾಗಿ ಗುಡ್ಡದ ಬಸವಣ್ಣ ದೇವಸ್ಥಾನದಲ್ಲಿ ಪರವು ಆಚರಣೆ
ಸವಣೂರು: ಮುಂಗಾರು ಹಂಗಾಮು ಆರಂಭಗೊಂಡರೂ ಸುರಿಯದ ವರುಣನ ಕೃಪೆಗಾಗಿ ಪ್ರಾರ್ಥಿಸಿ ಸೋಮವಾರ ನಗರದ ರೈತರು, ನಿವಾಸಿಗಳು ಸೇರಿ ಗುಡ್ಡದ ಬಸವಣ್ಣ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪರುವು ಆಚರಿಸಿದರು. ನಗರದ ರೇಣುಕಾದೇವಿ ದೇವಸ್ಥಾನದಿಂದ ಬೆಳಗ್ಗೆ 10ಕ್ಕೆ ಬಸವಣ್ಣ ಹಾಗೂ ಯಲ್ಲಮ್ಮ ದೇವರ ವಿಗ್ರಹಗಳನ್ನು ಪಲ್ಲಕ್ಕಿಯಲ್ಲಿರಿಸಿ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುಡ್ಡದ ಬಸವಣ್ಣನ ದೇವಸ್ಥಾನಕ್ಕೆ ತೆರಳಲಾಯಿತು. ನಂತರ ಗುಡ್ಡದ ಬಸವಣ್ಣನ ದೇವಸ್ಥಾನದ ಎದುರು ಪಲ್ಲಕ್ಕಿಗಳನ್ನಿರಿಸಿ ವಿಶೇಷ ಪೂಜೆ ಸಲ್ಲಿಸಿ ವರುಣನ ಕೃಪೆಗೆ ಪ್ರಾರ್ಥಿಸಲಾಯಿತು. ಕೆರೆಯಲ್ಲಿ ರೈತರು ಗಂಗಾಪೂಜೆ ಸಲ್ಲಿಸಿ, ಉಡಿ ತುಂಬಿ ಪೂಜೆ ಸಲ್ಲಿಸಿದರು. ರೈತರು ಲಕ್ಷಾಂತರ ಖರ್ಚು ಮಾಡಿ ಬಿತ್ತನೆ ಬೀಜ ಹಾಗೂ ದುಬಾರಿ ಬೆಲೆಯ ರಾಸಾಯನಿಕ ಗೊಬ್ಬರ ಕೊಂಡು ಬಿತ್ತನೆ ಕಾರ್ಯ ಮುಗಿಸಿದ್ದರು. ಮಳೆರಾಯ ಕೈಕೊಟ್ಟಿದ್ದರಿಂದ ಬೆಳೆಗಳು ಕಮರುತ್ತಿರುವುದನ್ನು ಕಂಡು ರೈತರು ಆತಂಕಕ್ಕೆ ಒಳಗಾಗಿದ್ದರು. ವರುಣ ಕೈಕೊಟ್ಟಾಗ ತಲೆತಲಾಂತರಗಳಿಂದ ಪರವು ಆಚರಣೆಯ ಪದ್ಧತಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿಕೊಂಡು ಬಂದಿದ್ದು, ವರುಣ ಕೃಪೆ ತೋರಿದ ನಿದರ್ಶನಗಳಿವೆ. ಸವಣೂರು ಜನತೆಗೆ ಗುಡ್ಡದ ಬಸವೇಶ್ವರ ದೇವರಿಗೆ ಪರುವು ಆಚರಣೆ ಮಾಡಲಾಗುತ್ತದೆ ಎಂದು ಪುರಸಭೆ ಸದಸ್ಯ ಸಂಗಪ್ಪ ಯರೆಸಿಮಿ ತಿಳಿಸಿದರು. ಎಪಿಎಂಸಿ ಸದಸ್ಯ ಮೈಲಾರೆಪ್ಪ ತಳ್ಳಿಹಳ್ಳಿ, ರುದ್ರಗೌಡ ಮುದಿಗೌಡ್ರ, ನಿಂಗಪ್ಪ ಕಳಕಪ್ಪನವರ, ರಾಮಣ್ಣ ಸಂಕ್ಲಿಪುರ, ಬಸವರಾಜ ರಾಯನಾಳ, ಗುಡ್ಡಪ್ಪ ಬಂಕಾಪುರ, ಬಸವರಾಜ ಹುಣಸಿ ಹಣ್ಣಿನವರ, ಶೇಖಪ್ಪ ಟಪಾಲ, ನೀಲಪ್ಪ ದೇವಗೇರಿ, ಹನುಮಂತಗೌಡ ಮುದಿಗೌಡ್ರ, ಸೋಮಣ್ಣ ಬಾಳಿಕಾಯಿ, ಹೆಗ್ಗಪ್ಪ ಬಂಕಾಪುರ ಇತರರು ಇದ್ದರು.