ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೆದ್ದಾರಿ ತಡೆಗೆ ರೈತರ ಯತ್ನ

Vishwanath S
Updated On : 8 Jul 2014, 11:10 am

ರಾಣಿಬೆನ್ನೂರು: ಹಾವೇರಿ ಹಾಗೂ ಬದಾಮಿಯ ರೈತರು, ನಿವೇಶನ ರಹಿತರು ಕುಮಾರಪಟ್ಟಣಂ ಸಮೀಪದ ಮಾಕನೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆಗೆ ಮುಂದಾಗಿದ್ದು, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿ, ಪ್ರತಿಭಟನೆ ಹಿಂದೆ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಬದಾಮಿ ಎಪಿಎಂಸಿ ಆವರಣದಲ್ಲಿರುವ ಸಾಧನಶ್ರೀ ಗುಡಿಸಲು ನಿವಾಸಿ ಪುನರ್ವಸತಿ ಸಂಘದ 120 ಸದಸ್ಯರು, ರೈತರು, ಕೂಲಿ ಕಾರ್ಮಿಕರು, ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರು ಮತ್ತು ಬಿಟಿ ಹತ್ತಿ ಬಿತ್ತನೆ ಮಾಡಿ ಹಾನಿಗೊಳಗಾದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೇಡಿಕೆ ಈಡೇರಿಸಿ: ಕರ್ನಾಟಕ ರಾಜ್ಯ ರೈತ ಸಂಘದ (ಚುನಾವಣೆ ರಹಿತ) ರಾಜ್ಯಾಧ್ಯಕ್ಷ ಜಿ.ಎ. ಲಕ್ಷ್ಮೀನಾರಾಯಣಗೌಡ ಮಾತನಾಡಿ, ಮಳೆ ಬಾರದೆ ರೈತರು ಆಕಾಶ ನೋಡುತ್ತಿದ್ದಾರೆ. ಕಳೆದ ಸಾಲಿನಲ್ಲಿ ಹತ್ತಿ ಬಿತ್ತಿ ಹಾನಿಗೊಳಗಾದ ರೈತರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಸರ್ಕಾರ ಬೇಗನೆ ಪರಿಹಾರ ಕೊಡಿಸಬೇಕು. ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡಬೇಕಾಗಿರುವ ಮುಂಡರಗಿ, ದುಗ್ಗಾವತಿ, ಹುಕವಾಡ, ಸಂಗೂರ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು. ಬದಾಮಿಯಲ್ಲಿ ಎಪಿಎಂಸಿ ಹಮಾಲಕ ಕಾಲನಿಯ ಖಾಲಿ ನಿವೇಶನಗಳಲ್ಲಿ ವಾಸಿಸಿರುವ ಬಡವರಿಗೆ, ಕಾರ್ಮಿಕರಿಗೆ ಅದೇ ಜಾಗೆ ಕಾಯಂಗೊಳಿಸಿ, ಪಟ್ಟಾ ನೀಡಿ, ಆಶ್ರಯ ಮನೆ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ಹಾವೇರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ಬ್ಯಾಂಕ್‌ಗಳಲ್ಲಿರುವ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು. ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿಯಲ್ಲಿರುವ ಯುಟಿಪಿ ಕಚೇರಿಯನ್ನು ಹಾವೇರಿಗೆ ಸ್ಥಳಾಂತರಿಸುವ ಹುನ್ನಾರ ಕೈಬಿಡಬೇಕು. ಸಾಲಕ್ಕಾಗಿ ಕೇಳುವ ನೋ ಡ್ಯೂ ಸರ್ಟಿಫಿಕೇಟ್‌ಗೆ ಬ್ಯಾಂಕ್ ಅಧಿಕಾರಿಗಳು ರೈತರಿಂದ ಹಣ ಕೇಳುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು. ಅಕ್ರಮ-ಸಕ್ರಮ ಯೋಜನೆಯಲ್ಲಿ ಉಳುಮೆ ಮಾಡಿರುವ ರೈತರ ಹೆಸರಿನಲ್ಲೇ ಖಾತೆ ಮಾಡಬೇಕೆಂದು ಆಗ್ರಹಿಸಿದರು.
ರು. 13 ಕೋಟಿ ಪರಿಹಾರ ವಿತರಣೆ: ಜಿಲ್ಲಾಧಿಕಾರಿ ಮಂಜುನಾಥ ನಾಯಕ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಹಾವೇರಿ ಜಿಲ್ಲೆಯಲ್ಲಿ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಹತ್ತಿ ಬೆಳೆ ಹಾನಿಯಾಗಿದೆ ಎಂದು ತಜ್ಞರು ವರದಿ ನೀಡಿದ್ದು, ಸರ್ಕಾರ ರು. 13 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಶೇ. 80ರಷ್ಟು ರೈತರಿಗೆ ಪರಿಹಾರ ವಿತರಿಸಲಾಗಿದೆ. ರೈತರು ಬ್ಯಾಂಕ್ ಖಾತೆ ಇತ್ಯಾದಿ ದಾಖಲೆ ಸಲ್ಲಿಸಲು ವಿಳಂಬ ಮಾಡಿದ್ದು, ಪರಿಹಾರ ವಿತರಿಸಲು ತೊಡಕಾಗಿದೆ ಎಂದು ವಿವರಿಸಿದರು.
ಎಸ್ಪಿ ಎನ್. ಶಶಿಕುಮಾರ್ ಇದ್ದರು. ರಾಜ್ಯ ರೈತ ಸಂಘದ ಮಹೇಶ್ ಕೊಟ್ಟೂರ, ಈರಣ್ಣ ಹಲಗೇರಿ, ಗದಿಗೆಪ್ಪ ದಾನಮ್ಮನವರ, ಸುಭಾಷ್ ಗವಿಯಪ್ಪನವರ, ಹನುಮಂತಪ್ಪ ಕಬ್ಬಾರ, ರಿಜ್ವಾನ್ ಆರಿಫ್ ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement