ಚರಂಡಿಗೆ ಬಿದ್ದು ಸರ್ಕಾರಿ ಆಸ್ಪತ್ರೆ ನೌಕರ ಸಾವು
ಹಾನಗಲ್ಲ: ಮಳೆ ನೀರಿನಲ್ಲಿ ಜಾರಿ ಚರಂಡಿಗೆ ಬಿದ್ದು ಸರ್ಕಾರಿ ಆಸ್ಪತ್ರೆ ನೌಕರನೊಬ್ಬ ಮೃತಪಟ್ಟ ಘಟನೆ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ದರ್ಗಾ ಬಡಾವಣೆಯ ನಿಂಗಪ್ಪ ಯಲ್ಲಪ್ಪ ಹನಕನಹಳ್ಳಿ (53) ಎಂಬುವವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬುಧವಾರ ಮಧ್ಯಾಹ್ನದಿಂದ ಪಟ್ಟಣದಲ್ಲಿ ಮಳೆ ಪ್ರಾರಂಭಗೊಂಡಿತ್ತು. ಈ ಸಮಯ ಆಸ್ಪತ್ರೆ ಸಮೀಪ ತೆರಳುತ್ತಿದ್ದ ನಿಂಗಪ್ಪ ಕಾಲುಜಾರಿ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಚರಂಡಿಯಲ್ಲಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅಲ್ಲಿಂದ ಸುಮಾರು ನೂರು ಮೀಟರ್ಗಳಷ್ಟು ದೂರಕ್ಕೆ ಮೃತದೇಹ ತೇಲಿ ಬಂದು ಶಿವಾನಂದ ಫೋಟೋ ಸ್ಟುಡಿಯೋ ಎದುರು ಸಿಕ್ಕಿಕೊಂಡಿತ್ತು. ಅಲ್ಲಿನ ಅಂಗಡಿ ಹಾಗೂ ಮನೆಗಳವರು ತಮ್ಮ ಮನೆ ಎದುರು ನೀರು ಹರಿಯದೇ ನಿಂತಿರುವುದನ್ನು ಗಮನಿಸಿ, ಚರಂಡಿ ವೀಕ್ಷಿಸಿದಾಗ ವ್ಯಕ್ತಿಯ ಕೈಗಳು ಕಂಡು ಬಂದಿವೆ. ಆಗ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.