ಬರ: ಅಭಿಯಂತರ ಕಚೇರಿಗೆ ಬೀಗ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 9
ಬರಗಾಲದಿಂದ ಜನತೆ ಕುಡಿಯುವ ನೀರಿಗಾಗಿ ಹತ್ತಾರು ಗ್ರಾಮಗಳಲ್ಲಿ ಪರಿತಪಿಸುತ್ತಿದ್ದಾರೆ. ಸಮಸ್ಯೆಯನ್ನಿಟ್ಟುಕೊಂಡು ಚುನಾಯಿತ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅವುಗಳನ್ನು ಬಗೆಹರಿಸುವಂತೆ ಹೇಳಲು ಯಾರೊಬ್ಬರೂ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿ ಸಿಬ್ಬಂದಿ ಹೊರ ಹಾಕಿ ಜಿಪಂ ಎಂಜಿನಿಯರಿಂಗ್ ಕಚೇರಿಗೆ ಬೀಗ ಜಡಿದು ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ ಪ್ರತಿಭಟನೆಗೆ ಮುಂದಾದ ಘಟನೆ ಮಂಗಳವಾರ ಜರುಗಿದೆ.
ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸೇರಿದಂತೆ ಯಾವೊಬ್ಬ ಸಿಬ್ಬಂದಿ ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ನೀಡುವುದಿಲ್ಲ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ತಮ್ಮದೇ ಆದ ದರ್ಬಾರ್ ನಡೆಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಹೇಳಿದರೂ ಹಾರಿಕೆ ಉತ್ತರದೊಂದಿಗೆ ದೂರವಾಣಿ ಕಟ್ ಮಾಡುವ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಜಿಪಂ ಸದಸ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಯಾವೊಂದು ಸಮಸ್ಯೆಗೆ ಜಿಪಂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಿತ್ಯ ಕಚೇರಿಗೆ ಅಲೆದಾಡಿದರೂ, ಕ್ಷೇತ್ರ ವೀಕ್ಷಣೆ ನೆಪ ನೀಡಿ ಜಾರಿಕೊಳ್ಳುತ್ತಾರೆ ಎಂದು ಆರೋಪಿಸಿದ ಜಿಪಂ ಸದಸ್ಯ ಹೊನ್ನಣ್ಣವರ ಕಾರ್ಯನಿರ್ವಾಹಕ ಅಭಿಯಂತ ಸೇರಿದಂತೆ ಸಹಾಯಕ ಎಂಜಿನಿಯರ್ಗಳು ಸಮಸ್ಯೆ ಕುರಿತು ಸ್ಪಷ್ಟ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು. ನಂತರ ಎಇಇ ಎಸ್.ವಿ. ದೇವನಾಳ ಆಗಿರುವ ಸಮಸ್ಯೆ ಕುರಿತು ಕುಳಿತು ಚರ್ಚಿಸೋಣ ಕಾಮಗಾರಿಗಳನ್ನು ತುರ್ತು ಕೈಗೊಳ್ಳಲಾಗುವುದು ಎಂದು ವಿನಂತಿಸಿದಾಗ ಕಚೇರಿಯ ಬೀಗ ತೆಗೆದು ಕೆಲಸಕ್ಕೆ ಅವಕಾಶ ಮಾಡಿಕೊಟ್ಟ ಸದಸ್ಯ ನಂತರ ಅಧಿಕಾರಿಗಳ ಕೊಠಡಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ಮಾಡಿರುವ ಆರೋಪದಲ್ಲಿ ಒಂದಾದರೂ ಸುಳ್ಳಿದ್ದರೆ, ಕ್ಷಣಾರ್ಧದಲ್ಲಿ ಜಿಪಂ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ ಹೊನ್ನಣ್ಣವರ ಕುಡಿಯುವ ನೀರು, ರಸ್ತೆ ಸೇರಿದಂತೆ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ತಕ್ಷಣ ಕ್ರಮ ಜರುಗಿಸದಿದ್ದರೆ, ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಸಿದರು.
ಎಇಇ ಎಸ್.ವಿ. ದೇವನಾಳ ಮಾತನಾಡಿ, ಜಿಪಂನ ಎಲ್ಲ ಸದಸ್ಯರ ದೂರುಗಳಿಗೆ ತಕ್ಷಣ ಸ್ಪಂದಿಸಲಾಗುತ್ತಿದೆ. ವಿಶೇಷವಾಗಿ ಕುಡಿಯುವ ನೀರಿನ ಯೋಜನೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಎಲ್ಲ ಸದಸ್ಯರೊಂದಿಗೆ ನಿರಂತರ ದೂರವಾಣಿ ಸಂಪರ್ಕದಲ್ಲಿರುವುದಾಗಿ ಸ್ಪಷ್ಟಪಡಿಸಿದರು. ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಾ ಆಡಿನ, ವಿರೂಪಾಕ್ಷಪ್ಪ ಆಡಿನ ಇತರರಿದ್ದರು.