ಮೇ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ
ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಂದಿದ್ದು, ಮೇ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಅದರಂತೆ ಬಿತ್ತನೆಯೂ ಸಹ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಾಗಿದೆ. ನಂತರ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 56ರಷ್ಟು ಕಡಿಮೆ ಮಳೆಯಾಗಿದ್ದು, ಈಗಾಗಲೇ ಮಳೆಯು ಪ್ರಾರಂಭವಾಗಿದೆಯೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಬಿ.ಪಿ. ಬಿರಾದಾರ ಅವರು ಹೇಳಿದರು.
ಅವರು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ 38ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಾವಿನ ಬೆಳೆಯು ಹೆಚ್ಚಾಗಿದ್ದು, ಇದಕ್ಕೆ ಸಂಬಂಧಪಟ್ಟ ಹಾಗೂ ಹಲವಾರು ವಿವಿಧ ಚಟುವಟಿಕೆಗಳನ್ನು ಸುತ್ತಮುತ್ತಲಿನ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಮಣ್ಣು ಮಾದರಿ ಸಂಗ್ರಹಿಸಿ ಅವುಗಳನ್ನು ವಿಶ್ಲೇಷಿಸಿದ ನಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಸಹಯೋಗದೊಂದಿಗೆ ಯಾವುದಾದರೂ ಎರಡು ತಾಲೂಕುಗಳಲ್ಲಿ ಕಾರ್ಯಕ್ರಮ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರದಲ್ಲಿ ಜರುಗುವ ಹಲವಾರು ಕ್ರಮಗಳನ್ನು ಹಾಗೂ ರೈತರಿಗೆ ಬೇಕಾದ ಸವಲತ್ತುಗಳ ಬಗ್ಗೆ ಮೊಬೈಲ್ಗಳ ಮೂಲಕ ಸಂದೇಶವನ್ನು ಹಾಗೂ ಮುದ್ರಣ ವ್ಯವಸ್ಥೆ ಮೂಲಕ ರೈತರಿಗೆ ಸಂದೇಶವನ್ನು ನೀಡಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸಿದರು. ಕೃಷಿ ಕೇಂದ್ರದಲ್ಲಿ ಜರುಗುವ ವಿವಿಧ ತಳಿಗಳ ಮಾಹಿತಿಗಳನ್ನು ಲೇಖನದ ಮೂಲಕ ಪ್ರಚಾರಪಡಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಬೆಂಗಳೂರಿನ ತಾಂತಿಕ ಅಧಿಕಾರಿ ಡಾ. ರಾಮಮೂರ್ತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಂ.ಬಿ. ಚಟಿ, ಹನುಮನಟ್ಟಿ ಕೃಷಿ ಮಹಾ ವಿದ್ಯಾಲಯದ ಡೀನ್ ಡಾ. ವಿ.ಐ. ಬೆಣಿಗಿ, ಕಾರ್ಯಕ್ರಮ ಸಂಯೋಜಕ ಡಿ.ಎಸ್. ಮಲ್ಲಿಕಾರ್ಜುನಪ್ಪಗೌಡ, ಜಂಟಿ ಕೃಷಿ ನಿರ್ದೇಶಕ ಗಣೇಶ ನಾಯ್ಕ, ಜಿಲ್ಲಾ ಮಟ್ಟದ ಅಧಿಕಾರಿಗಳು ರೈತ ಮುಖಂಡರು ಉಪಸ್ಥಿತರಿದ್ದರು.