ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಸ್ತೆ ಅಗಲೀಕರಣಕ್ಕೆ ಶೀಘ್ರ ಚಾಲನೆ

Mainashree
Updated On : 10 Jul 2014, 9:13 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 9
ಹೆಸ್ಕಾಂ ಮತ್ತು ಅರಣ್ಯ ಇಲಾಖೆಗಳು ಹಸಿರು ನಿಶಾನೆ ತೋರಿದ ಕೂಡಲೇ ಪಟ್ಟಣದ ಪಾಂಡುರಂಗ ಚಿತ್ರ ಮಂದಿರದಿಂದ ರೈಲ್ವೆ ನಿಲ್ದಾಣದವರೆಗಿನ ಮೊದಲ ಹಂತದ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಲಿದೆ. ಈ ಕುರಿತು ಎದುರಾಗುವ ಸಮಸ್ಯೆಗಳನ್ನು ಸಭೆಗೆ ತಿಳಿಸುವಂತೆ ತಹಸೀಲ್ದಾರ್ ಶಿವಶಂಕರನಾಯ್ಕ ಮನವಿ ಮಾಡಿದರು.
ಪಟ್ಟಣದ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಮುಖ್ಯರಸ್ತೆ ಅಗಲೀಕರಣಕ್ಕೆ ಚಾಲನೆ ದೊರೆತಿದ್ದು, ಬುಧವಾರ ಜರುಗಿದ ಅಧಿಕಾರಿಗಳ ಮತ್ತು ರೈತ ಮುಖಂಡರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಬ್ಯಾಡಗಿ ನಾಗರಿಕರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಮನೋಭಾವನೆ ಉಳ್ಳವರಲ್ಲ. ಆದರೆ, ಮೋಟೆಬೆನ್ನೂರು ರಸ್ತೆ ಮಾರ್ಗದಲ್ಲಿ ಪಟ್ಟಣದ ವ್ಯಾಪ್ತಿ ಹೊರತುಪಡಿಸಿ ಇನ್ನುಳಿದ ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದು, ರಸ್ತೆ ಪಕ್ಕದ ಮರ ಉರುಳಿಸೋ ಸಂದರ್ಭ ಬೆಳೆಗಳಿಗೆ ತೊಂದರೆಯಾಗದಂತೆ ಮತ್ತು ಕೃಷಿಭೂಮಿ, ಜನ, ಜಾನುವಾರು ಸಂಚರಿಸಲು ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಹೆಸ್ಕಾಂ ಎಇಇ ಹಾಲೇಶ್ ಅಂತರವಳ್ಳಿ ಮಾತನಾಡಿ, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕುರಿತು ಅಂದಾಜು ಪಟ್ಟಿಗೆ ಅನುಮೋದನೆ ದೊರೆತಿದ್ದು, ಲೋಕೋಪಯೋಗಿ ಇಲಾಖೆ ಅದಕ್ಕೆ ಸಂಬಂಧಿಸಿದ ನಿರ್ವಹಣಾ ವೆಚ್ಚ ಹೆಸ್ಕಾಂಗೆ ಭರಿಸಿದ್ದು, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿಕೊಳ್ಳಲು ಸಂಪೂರ್ಣ ಒಪ್ಪಿಗೆ ಇದೆ. ಆದರೆ, ಮರಗಳನ್ನು ಕಡಿದ ಬಳಿಕವೇ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವುದು ಸೂಕ್ತವೆಂದರು.
ಮುಖ್ಯಾಧಿಕಾರಿ ಜಿ.ಟಿ. ವೀರೇಶಕುಮಾರ, ವಿದ್ಯುತ್ ಕಂಬಗಳನ್ನು ಚರಂಡಿಗಳ ಪಕ್ಕಕ್ಕೆ ಸ್ಥಳಾಂತರ ಮಾಡುತ್ತಿದ್ದು, ಈ ಸಂದರ್ಭದಲ್ಲಾಗುವ ಹಾನಿಯನ್ನು ಲೋಕೋಪಯೋಗಿ ಇಲಾಖೆಯೇ ಭರಿಸಬೇಕು. ಅಗಲೀಕರಣಕ್ಕೆ ಅವಶ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಪುರಸಭೆ ಮಾಡಿಕೊಡಲಿದೆ ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಮುರಿಗೆಪ್ಪ ಶೆಟ್ಟರ್, ಮಲ್ಲಿಕಾರ್ಜುನ ಬಳ್ಳಾರಿ, ಅಶೋಕ ಛತ್ರದ, ಚಿಕ್ಕಪ್ಪ ಛತ್ರದ, ಹೆಸ್ಕಾಂ ಕಿರಿಯ ಅಭಿಯಂತ ಮಾಲತೇಶ ಕುರುಬಗೊಂಡ, ಮಾಲತೇಶ ಹುಣಸಿಮರದ, ಎಪಿಂಎಸಿ ಕಾಯದರ್ಶಿ ಕೆ.ಟಿ. ಓಬಳಪ್ಪ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement