ದೇವಗಿರಿ ಗ್ರಾಮದಲ್ಲಿ ಮನೆ ಕಾಮಗಾರಿ ವೇಳೆ ಜೈನ ವಿಗ್ರಹ ಪತ್ತೆ: ಸಾರ್ವಜನಿಕರಿಂದ ಪೂಜೆ
ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದಲ್ಲಿ ಪುರಾತನ ಕಾಲದ ಜೈನ ತೀರ್ಥಂಕರರ ಎರಡು ವಿಗ್ರಹಗಳು ಪತ್ತೆಯಾಗಿವೆ. ಗ್ರಾಮದ ಶಂಭಣ್ಣ ಸಂಗೂರು ಎಂಬುವರ ಮನೆ ಮುಂದೆ ನೀರಿನ ಟ್ಯಾಂಕ್ಗಾಗಿ ನೆಲ ಅಗೆಯುತ್ತಿದ್ದಾಗ ಮಂಗಳವಾರ ರಾತ್ರಿ ಈ ಮೂರ್ತಿಗಳು ಸಿಕ್ಕಿವೆ. ಯಾವ ಕಾಲದ, ಯಾವ ತೀರ್ಥಂಕರರ ವಿಗ್ರಹಗಳು ಇವು ಎಂಬುದು ಗೊತ್ತಾಗಿಲ್ಲ. ವಿಗ್ರಹಗಳು ಸಿಕ್ಕ ಸ್ಥಳಕ್ಕೆ ಜನರು ಬಂದು ಕುತೂಹಲದಿಂದ ವೀಕ್ಷಿಸುತ್ತಿದ್ದು, ಪೂಜೆ ಸಲ್ಲಿಸುತ್ತಿದ್ದಾರೆ. ಮನೆಯ ಯಜಮಾನ ಶಂಭಣ್ಣ ಮಾಹಿತಿ ನೀಡಿ, ಹೊಸ ಮನೆ ನಿರ್ಮಾಣ ಆಗುತ್ತಿದೆ. ಮಂಗಳವಾರ ರಾತ್ರಿ ನೀರಿನ ಟ್ಯಾಂಕ್ಗೆ ನೆಲ ಅಗೆಯುತ್ತಿದ್ದಾಗ ಒಂದು ವಿಗ್ರಹ ಸಿಕ್ಕಿತು. ಅದನ್ನು ಎತ್ತಿಟ್ಟು ಮತ್ತೆ ಕೆಲಸ ಶುರು ಮಾಡಿದೆವು. ಇನ್ನೊಂದು ಮೂರ್ತಿ ಸಿಕ್ಕಿದೆ. ಈಗ ಕಾಮಗಾರಿ ಸ್ಥಗಿತಗೊಳಿಸಿ, ಎರಡೂ ವಿಗ್ರಹಗಳನ್ನು ಮನೆಯಲ್ಲಿ ಇಟ್ಟಿದ್ದೇವೆ. ಒಂದು 3 ಅಡಿ, ಮತ್ತೊಂದು ಮೂರುವರೆ ಅಡಿ ಎತ್ತರ ಇವೆ. ಜನರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇವು ಜೈನ ತೀರ್ಥಂಕರರ ಮೂರ್ತಿಗಳಂತೆ ಕಾಣುತ್ತಿವೆ. ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಗ್ರಾಮದಲ್ಲಿ ಜೈನ ಧರ್ಮೀಯರು ಅಧಿಕ ಸಂಖ್ಯೆಯಲ್ಲಿದ್ದು, ಬಸದಿ ನಿರ್ಮಿಸುವ ಕುರಿತಾಗಿ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಗುಂಡಿ ತೋಡುತ್ತಿದ್ದಾಗ ಒಂದು ವಿಗ್ರಹಕ್ಕೆ ಹಾನಿಯಾಗಿದೆ. ಮೂರ್ತಿಯ ಸುತ್ತ ಸುಂದರವಾದ ಕೆತ್ತನೆಯಿದೆ. ವರ್ಷದ ಹಿಂದೆ ಶಂಭಣ್ಣನವರ ಜಮೀನಿನ ಪಕ್ಕದಲ್ಲಿ ಜೈನ ಮುನಿಯೊಬ್ಬರು ನಡೆದು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಆ ಘಟನೆ ಸಂಭವಿಸಿ ಮಂಗಳವಾರಕ್ಕೆ ಸರಿಯಾಗಿ ಒಂದು ವರ್ಷ. ಅದೇ ಹೊತ್ತಿಗೆ ಅವರ ಮನೆಯ ಮುಂದೆಯೇ ಮೂರ್ತಿಗಳೂ ಸಿಕ್ಕಿದ್ದು ಕುತೂಹಲ ಹೆಚ್ಚಿಸಿದೆ. ಸಾವನ್ನಪ್ಪಿದ ಜೈನ ಮುನಿಗೂ, ವಿಗ್ರಹಗಳ ಪತ್ತೆಗೂ ಗ್ರಾಮಸ್ಥರು ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದಾರೆ. ಪುರಾತತ್ವ ಇಲಾಖೆಗೆ ಮಂಗಳವಾರವೇ ಮಾಹಿತಿ ನೀಡಿದ್ದರೂ ಇನ್ನೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಮೂರ್ತಿಗಳ ಕುರಿತು ಇನ್ನಷ್ಟು ಅಧ್ಯಯನ ಅಗತ್ಯವಿದೆ ಎಂದು ಗ್ರಾಮದ ಮೋಹನ ರಣದವೆ ತಿಳಿಸಿದ್ದಾರೆ.