ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದಲಿತರಿಗೆ ಕ್ಷೌರ ನಿಷೇಧ: ಪರಿಶೀಲನೆ

Lingaraj Badiger
Updated On : 18 Jul 2014, 11:35 am

ಬ್ಯಾಡಗಿ: ದಲಿತರಿಗೆ ಕ್ಷೌರ ನಿಷೇಧಿಸಿದ್ದ ತಡಸ ಗ್ರಾಮಕ್ಕೆ ತಹಸೀಲ್ದಾರ್ ಶಿವಶಂಕರ ನಾಯ್ಕ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ತಡಸ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿಷೇಧಿಸಿದ್ದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ದೂರನ್ನಾಧರಿಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ. ಅಣ್ಣಪ್ಪರೊಂದಿಗೆ ಸ್ಥಳಕ್ಕೆ ತೆರಳಿದ ತಹಸೀಲ್ದಾರ್ ವಿಚಾರಣೆ ನಡೆಸಿದರು.
ಹರಿಜನ ಕೇರಿಗೆ ಭೇಟಿ: ದಲಿತರ ಕೇರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಮಾದಿಗ ಸಮಾಜದ ಮುಖಂಡರಿಂದ ಅಹವಾಲು ಸ್ವೀಕರಿಸಿದರು. ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದು, ಅದರಲ್ಲೂ ಮಾದಿಗ ಸಮಾಜದ ಜನರಿಗೆ ಕ್ಷೌರ ಮಾಡುವುದನ್ನು ನಿಷೇಧಿಸಲಾಗಿದೆ, ಇದನ್ನು ಸಮಾಜದ ಜನರು ಪ್ರಶ್ನಿಸಿದರೆ ಮಾದಿಗರಿಗೆ ಕ್ಷೌರ ಮಾಡುವುದಿಲ್ಲ. ಬೇರೆ ಊರಿಗೆ ತೆರಳಿ ಮಾಡಿಸಿಕೊಳ್ಳುವಂತೆ ಕ್ಷೌರಿಕನಿಂದ ನೇರ ಉತ್ತರ ಬರುತ್ತದೆ. ಬಡತನದಿಂದ ಬಳಲುತ್ತಿರುವ ಸಮಾಜದ ಜನರಿಗೆ ಇದರಿಂದ ಸುಮಾರು ರು. 100 ವೆಚ್ಚವಾಗಲಿದೆ ಎಂದು ಆರೋಪಿಸಿದರು.
ಗ್ರಾಮದ ಚಹದ ಅಂಗಡಿಗಳಲ್ಲಿ ಮಾದಿಗ ಸಮಾಜದ ಜನರಿಗೆ ಇಂದಿಗೂ ಪ್ರತ್ಯೇಕ ಚಹದ ಲೋಟಾ ಹಾಗೂ ತಟ್ಟೆಗಳನ್ನು ಇಡಲಾಗಿದೆ. ಇದನ್ನು ಪಡೆದುಕೊಳ್ಳುವ ನಾವು ಸ್ವಚ್ಛಗೊಳಿಸಿ ಮರಳಿ ನೀಡಬೇಕಾಗಿದೆ. ಇದರಿಂದ ಸಮಾಜವನ್ನು ದಲಿತ-ಸವರ್ಣೀಯ, ಮೇಲು-ಕೀಳು ಎಂಬುದಾಗಿ ವಿಘಟನೆಗೆ ನಾಂದಿಯಾಗಲಿದ್ದು, ಕೂಡಲೇ ಅನಿಷ್ಟ ಪದ್ಧತಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ತಪ್ಪೊಪ್ಪಿಗೆ ಪತ್ರ: ಕ್ಷೌರಿಕ ನಾಗರಾಜ ಎಂಬಾತನನ್ನು ಗ್ರಾಪಂ ಕಾರ್ಯಾಲಯಕ್ಕೆ ಕರೆ ತಂದ ತಹಸೀಲ್ದಾರ್ ಕ್ಷೌರಿಕ ನಾಗರಾಜನಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡರಲ್ಲದೇ, ಸಾರ್ವಜನಿಕ ಸ್ಥಳದಲ್ಲಿಟ್ಟು, ಕ್ಷೌರ ಮಾಡಿದಲ್ಲಿ ಎಲ್ಲ ಸಮಾಜದ ಜನರ ಕ್ಷೌರ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಕ್ಷೌರ ಸ್ಥಗಿತಗೊಳಿಸುವಂತೆ ಸೂಚಿಸಿದರು. ಈ ಸಂದರ್ಭ ಪಿಡಿಒ ಲತಾ ತಬರೆಡ್ಡಿ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement