ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಗರಸಭೆ ಎದುರು ಕಸ ಚೆಲ್ಲಿ ಆಕ್ರೋಶ

Lingaraj Badiger
Updated On : 18 Jul 2014, 11:35 am

ಹಾವೇರಿ: ಮನೆ, ಓಣಿಗಳ ಮುಂದೆ ಕೊಳೆಯುತ್ತಿರುವ ಕಸದ ರಾಶಿ ನೋಡಿ ಸಾಕಾದ ಜನತೆ ಗುರುವಾರ ಅದನ್ನು ನಗರಸಭೆ ಕಾರ್ಯಾಲಯದ ಎದುರು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಮೂಲಸೌಕರ್ಯ ಒದಗಿಸಿ ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿ ಹಾವೇರಿ ಸುಧಾರಣಾ ಸಮಿತಿ, ಕನ್ನಡ ರಕ್ಷಣಾ ವೇದಿಕೆ ಹಾಗೂ ರಾಜ್ಯ ರೈತ ಸಂಘ ಶಹರ ಘಟಕದ ಕಾರ್ಯಕರ್ತರು ಟ್ರ್ಯಾಕ್ಟರ್ ತುಂಬ ಕಸ ತುಂಬಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ಟ್ರ್ಯಾಕ್ಟರ್ ತುಂಬ ಕಸ ತುಂಬಿಕೊಂಡು ಅದರಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಶಾಸಕರ ಪ್ರತಿಕೃತಿ ಕಟ್ಟಿಕೊಂಡು ಅವರ ವಿರುದ್ಧ ಘೋಷಣೆ ಕೂಗಿದರು. ಹಲಗೆ ಬಾರಿಸುತ್ತಾ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಎರಡು ಗಂಟೆಗೂ ಅಧಿಕ ಕಾಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆದರು. ನಂತರ ನಗರಸಭೆಗೆ ಆಗಮಿಸಿ, ನಗರಸಭೆ ಕಚೇರಿಯ ಗೇಟ್ ಎದುರೇ ಕಸ ಸುರಿದು, ಕಸದ ಮೇಲೆ ನಗರಸಭೆ ಅಧ್ಯಕ್ಷ ಹಾಗೂ ಶಾಸಕರ ಪ್ರತಿಕೃತಿಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದರು.
ಕರವೇ ಜಿಲ್ಲಾಧ್ಯಕ್ಷ ಕರಬಸಯ್ಯ ಬಸರಿಹಳಅಳಿ ಮಾತನಾಡಿ, ಹಾವೇರಿ ನಗರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ನಗರದಲ್ಲೆಲ್ಲ ಕಸದ ರಾಶಿಯೇ ಬದ್ದಿದೆ. ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿ ನಗರದ ಸ್ವಚ್ಛತೆ ಕುರಿತು ನಿರ್ಲಕ್ಷ್ಯ ತೋರಿದ್ದಾರೆ. ನಗರಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂದು ದೂರಿದರು.
ನಗರ ಅಭಿವೃದ್ಧಿ ಬಗ್ಗೆ ಇಲ್ಲಿನ ಆಡಳಿತ ಮಂಡಳಿ ಹಾಗೂ ಪೌರಾಯುಕ್ತರು ಗಮನಹರಿಸುತ್ತಿಲ್ಲ. ನಗರದಲ್ಲಿ ನಡೆಯುತ್ತಿರುವ ನಗರೋತ್ಥಾನ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ನಗರದೆಲ್ಲೆಡೆ ಕಸ ತುಂಬಿ ತುಳುಕುತ್ತಿದೆ. ಕುಡಿಯಲು ಸಮರ್ಪಕ ನೀರು ಲಭ್ಯವಾಗುತ್ತಿಲ್ಲ. ಈ ಬಗ್ಗೆ ಮನವಿ ಸಲ್ಲಿಸಿದರೂ ನಗರಸಭೆ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಯಿತು ಎಂದರು.ಹಾವೇರಿ ಸುಧಾರಣಾ ಸಮಿತಿ ಅಧ್ಯಕ್ಷ ಯಲ್ಲಪ್ಪ ಭೋಸ್ಲೆ ಮಾತನಾಡಿ, ನಗರ ನೈರ್ಮಲ್ಯ ಕುರಿತು ಜೂ. 7ರಂದು ಶಾಂತಿಯುತ ಪ್ರತಿಭಟನೆ ಮಾಡಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಪೌರಾಯುಕ್ತರು 15 ದಿನದೊಳಗೆ ನಗರ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಕ್ರಮ ಕೈಗೊಂಡಿಲ್ಲ. ಹಾಗಾಗಿ ಕಸವನ್ನು ನಾವೇ ತೆಗೆದು ನಗರಸಭೆ ಕಚೇರಿ ಎದುರು ಹಾಕಿದ್ದೇವೆ ಎಂದರು. ಈರಣ್ಣ ಪಟ್ಟಣಶೆಟ್ಟಿ, ಮೆಹಬೂಬಸಾಬ ಹೊಸರಿತ್ತಿ, ಸತೀಶಗೌಡ್ರ ಮುದಿಗೌಡ್ರ, ಶ್ರೀನಿವಾಸ ದೇಸಾಯಿ, ಸುಧಾರಣಾ ಸಮಿತಿಯ ಶಿವಾನಂದ ಚಕ್ರಸಾಲಿ, ರಾಘು ನಾಯಕ, ಶಿವು ಹೊರಡಿ, ಮಹೇಶ ಹೆಬ್ಬಾರ, ರೈತ ಸಂಘದ ಸುರೇಶ ಚಲವಾದಿ, ಶಿವಬಸಪ್ಪ ಗೋವಿ, ಮಹೇಶ ಹೆಬ್ಬಾರ, ಸುರೇಶ ಭೋಸಲೆ, ಮಂಜು ಉಪ್ಪಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement