ವಾಣಿಜ್ಯ ಮಳಿಗೆ ವಿವಾದ: ಪರಿಶೀಲನೆ
ಬ್ಯಾಡಗಿ: ಪಟ್ಟಣದ ಸುಭಾಸ್ ವೃತ್ತದ ಬಳಿ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆ ಕಟ್ಟಡ ವಿವಾದಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿ ಕಾಮಗಾರಿ ಸ್ಥಗಿತಗೊಳಿಸಿ ಆಟೋರಿಕ್ಷಾ ನಿಲ್ದಾಣ, ವಾರದ ಸಂತೆಗೆಂದು ಆಗಮಿಸುವ ವಾಹನಗಳಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದ್ದರು.
ಚಂದ್ರಶೇಖರ ಛತ್ರದ ಮಾತನಾಡಿ, ಸುಭಾಸ್ ವೃತ್ತ ವಾಹನ, ಜನನಿಬಿಡ ಪ್ರದೇಶವಾಗಿದೆ. ಅಲ್ಲದೇ ವೃತ್ತಕ್ಕೆ ಹೊಂದಿಕೊಂಡು ವಾರದ ಸಂತೆ ಮೈದಾನವಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿದೆ. ಆದರೆ, ಹಳೆಯ ಕಟ್ಟಡಗಳನ್ನು ಶಿಥಿಲಗೊಳಿಸಿ ಹೊಸ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದು, ಇವುಗಳಲ್ಲಿ ಪೂರ್ವ ಭಾಗದಲ್ಲಿ ಮಳಿಗೆಗಳು ಆಟೋರಿಕ್ಷಾ ನಿಲ್ದಾಣ, ವಾರದ ಸಂತೆಗೆಂದು ಆಗಮಿಸುವ ವಾಹನಗಳಿಗೆ ತೊಂದರೆ ಕೊಡುವ ಸಾಧ್ಯತೆಯಿದೆ ಎಂದರು. ಪೂರ್ವ ಭಾಗದಲ್ಲಿ ಸಾಲಾಗಿ 5 ಮಳಿಗೆಗಳನ್ನು ನಿರ್ಮಿಸುವ ಬದಲು ಕೆಳ ಭಾಗದಲ್ಲಿ 2 ಮೇಲಂತಸ್ತಿನಲ್ಲಿ 2 ಮಳಿಗೆ ನಿರ್ಮಿಸಿದಲ್ಲಿ ಮೋಟೆಬೆನ್ನೂರು ಮತ್ತು ಕದರಮಂಡಲಗಿ ಮಾರ್ಗವಾಗಿ ಆಗಮಿಸುವ ವಾಹನಗಳಿಗೆ ಸ್ಥಳದ ಅವಕಾಶ ಲಭ್ಯವಾಗಲಿದೆ. ಅಲ್ಲದೇ ಆಟೋರಿಕ್ಷಾ ನಿಲ್ದಾಣ, ವಾರದ ಸಂತೆಗೆ ಆಗಮಿಸುವ ವಾಹನಗಳಿಗೆ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ನಿರ್ಧಾರ: ಸಾರ್ವಜನಿಕರನ್ನು ಸಮಾಧಾನಪಡಿಸಿದ ಮುಖ್ಯಾಧಿಕಾರಿ ಜಿ.ಟಿ. ವೀರೇಶಕುಮಾರ ಮಾತನಾಡಿ, ಅಹವಾ ಲುಗಳನ್ನು ಕೇಳಿದ್ದೇವೆ. ಈ ಕುರಿತು ಪುರಸಭೆ ಸದಸ್ಯರ ಸಭೆ ಕರೆದು ಬಳಿಕ ನಿರ್ಧರಿಸುವುದಾಗಿ ತಿಳಿಸಿದರು.
ಪುರಸಭೆ ಉಪಾಧ್ಯಕ್ಷೆ ಸುಧಾ ಕಳ್ಳಿಹಾಳ, ಮಹೇಶ ಉಜನಿ, ಸದಸ್ಯರಾದ ಬಸವರಾಜ ಛತ್ರದ, ಮಂಜುನಾಥ ಭೋವಿ, ನಾರಾಯಣಪ್ಪ ಕರ್ನೂಲ, ರೋಹಿಣಿ ಹುಣಶೀಮರದ, ಪ್ರಶಾಂತ್ ಯಾದವಾಡ ದುರ್ಗೇಶ ಗೋಣೆಮ್ಮನವರ, ಕರವೇ ಕಾರ್ಯಕರ್ತರಾದ ಶಂಕರ ಕುಸಗೂರು, ಬಸವರಾಜ ಹಾವನೂರ, ಸುನಿಲ್ ಉಜನಿ, ಮಂಜುನಾಥ ಶಿರಾಳಕೊಪ್ಪ, ರಾಜು ಬಸಾಪುರ, ಸಿಕಂದರ್ ಹಲಗೇರಿ, ಉಸ್ಮಾನ್ ಎರೆಶೀಮಿ, ಪ್ರಕಾಶ ಹೆಗ್ಡೆ, ಕೃಷ್ಣ ಕರ್ಚಡ, ಗಣೇಶ ಪಾತ್ರೋಟಿ ಇತರರಿದ್ದರು.