ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾವೇರಿಯಲ್ಲೇ ಸಮ್ಮೇಳನ ನಡೆಸಿ

Mainashree
Updated On : 9 Jun 2014, 11:03 am

ಗುತ್ತಲ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿಯಲ್ಲಿ ನಡೆಸುವಂತೆ ಒತ್ತಾಯಿಸಿ ಕಸಾಪ ಹೊಸರಿತ್ತಿಯ ಗ್ರಾಮೀಣ ಘಟಕ ಭಾನುವಾರ ಬೃಹತ್ ಪ್ರತಿಭಟನೆ ಮಾಡುವುದರೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿತು.
ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವಂತೆ ಹೊಸರಿತ್ತಿಯ ಗ್ರಾಮೀಣ ಘಟಕದ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರನ್ನು ಒಳಗೊಂಡ ಸಾಹಿತ್ಯಾಸಕ್ತರು ಗುದ್ದಲೀಶ್ವರ ಮಠದಿಂದ ಮೆರವಣಿಗೆ ಪ್ರಾರಂಭಿಸಿ ಹೊಸರಿತ್ತಿಯ ಮಾರುಕಟ್ಟೆ, ಜಿವಿಎಚ್ ಕಾಲೇಜು ಮುಖಾಂತರ ಸಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಿಲ್ಲಾ ಕೇಂದ್ರ ಸ್ಥಳದಲ್ಲಿ ಸಾಹಿತ್ಯ ಸಮೇಳನಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಗಳ ವಿರುದ್ಧ ಘೋಷಣೆ ಹಾಕಿದರಲ್ಲದೇ ಹಟಮಾರಿ ಧೋರಣೆ ಅನುಸರಿಸುತ್ತಿರುವ ಕಸಾಪ ಜಿಲ್ಲಾ ಅಧ್ಯಕ್ಷ ಜಿ.ಬಿ. ಮಾಸಣಗಿಗೆ ಧಿಕ್ಕಾರ ಕೂಗಿದರು.
ಬಸ್ ನಿಲ್ದಾಣದ ಮೈಲಾರ ಮಹಾದೇವ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಾಹಿತ್ಯಾಭಿಮಾನಿಗಳು, ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ ಕ್ರಮ ಖಂಡಿಸಿದರು. ರಾಜ್ಯ ಸಮಿತಿ ತಕ್ಷಣವೇ ಯೋಗ್ಯ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟಕ್ಕೂ ಸಿದ್ಧ ಎಂಬ ಎಚ್ಚರಿಕೆಯನ್ನು ಸೇರಿದ್ದ ನೂರಾರು ಸಾಹಿತ್ಯಾಸಕ್ತರು ವ್ಯಕ್ತಪಡಿಸಿದರು.
ಈ ಹಿಂದೆ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವಂತೆ ತೆಗೆದುಕೊಂಡ ನಿರ್ಣಯಕ್ಕೆ ಕಸಾಪ ಜಿಲಾಧ್ಯಕ್ಷ ಕಳೆದ ಜಿಲ್ಲಾ ಕಸಾಪ ಸಭೆಯಲ್ಲಿ ತಮಗೆ ಹತ್ತಿರವಿರುವ ಸಾಹಿತ್ಯಾಸಕ್ತರ ಮನವೊಲಿಸಿ ಕುತಂತ್ರದಿಂದ ಸಹಿ ಸಂಗ್ರಹಿಸಿ ರಾಣಿಬೆನ್ನೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವಂತೆ ರಾಜ್ಯ ಘಟಕಕ್ಕೆ ಒತ್ತಾಯಿಸಿರುವುದು ಖಂಡನೀಯ ಎಂದರು. ಉಪನ್ಯಾಸಕ ಬಿ.ಎಸ್. ಯಾವಗಲ್ ಮಾತನಾಡಿ, ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿಯಲ್ಲಿ ಸಮ್ಮೇಳನ ನಡೆಯಬೇಕು. ಹಠಮಾರಿ ಧೋರಣೆ ಬಿಟ್ಟು ಕನ್ನಡ ಸಾಹಿತ್ಯಕ್ಕೆ ಕುಂದು ಬಾರದಂತೆ ಹಾವೇರಿಗೆ ಒಲಿದು ಬಂದ ಸಾಹಿತ್ಯ ಸಮ್ಮೇಳನ ನಡೆಸುವಂತೆ ಆಗ್ರಹಿಸಿದರು.
ತಾಪಂ ಸದಸ್ಯೆ ಸುಮಾ ಏಕಬೋಟೆ, ಗ್ರಾಪಂ ಅಧ್ಯಕ್ಷೆ ಕಮಲಾಕ್ಷಮ್ಮ ಹೇಮಗೀರಿಮಠ, ಕೆ.ಸಿ. ಕೋರಿ, ಮಾಲತೇಶ ಬೆಟಗೇರಿ, ತೋಟಪ್ಪ ಹಳ್ಳಿಕೇರಿ, ಬಿ.ಎಸ್. ಚಲ್ಲಾಳ, ಪ್ರಾಚಾರ್ಯ ಎಚ್.ಆರ್. ಎಡಳ್ಳಿ, ವಿ.ಎಸ್. ತೋರಗಲ್, ಚನ್ನವೀರಯ್ಯ ಹಾವೇರಿಮಠ, ರಾಜಣ್ಣ ಅಗಸಿಬಾಗಿಲ, ಕೆ.ವೈ. ಪಿಡ್ಡಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಹಾವೇರಿಯಲ್ಲೆ ನಡೆಸಿ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾಲಕ್ಕಿ ನಗರ ಹಾವೇರಿಯಲ್ಲಿಯೇ ಜರುಗಿಸಬೇಕೆಂದು ಸವಣೂರು ತಾಲೂಕು ಸಾಹಿತ್ಯಾಸಕ್ತರ ಬಳಗ ಆಗ್ರಹಿಸಿದೆ. ಈ ಕುರಿತು ಸವಣೂರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿಯೇ ಜರುಗಿಸಬೇಕು ಎಂದು ಹಿಂದಿನ ವರ್ಷ ಮಡಿಕೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಕಸಾಪ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಪರಿಷತ್ತಿನ ರಾಜ್ಯ ಅಧ್ಯಕ್ಷರು ನಿರ್ಣಯ ಕೈಗೊಂಡು ಸ್ಥಳ ಘೋಷಣೆ ಮಾಡಿದ್ದಾರೆ. ಆದರೆ, ಕೆಲವರ ಸ್ವಂತ ಹಿತಾಸಕ್ತಿಗೋಸ್ಕರ ಕೇಂದ್ರ ಸಮಿತಿ ನಿರ್ಣಯ ಕಡೆಗಣಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಇನ್ನಿತರರ ಗಮನಕ್ಕೆ ತರದೇ ಏಕಪಕ್ಷೀಯವಾಗಿ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸಲು ಮುಂದಾಗಿರುವುದು ಖಂಡನೀಯ ಎಂದರು.
ಜಯತೀರ್ಥ ದೇಶಪಾಂಡೆ, ಉಮೇಶ ದಾಮೋದರ, ಪ್ರವೀಣ ಚರಂತಿಮಠ, ಮಲ್ಲಾರೆಪ್ಪ ತಳ್ಳಿಹಳ್ಳಿ, ರಮೇಶ ಮುದಗಲ್, ಬಸವರಾಜ ಚಳ್ಳಾಳ, ಚಂದ್ರು ಚಾಕಲಬ್ಬಿ, ಈರಯ್ಯ ಹಿರೇಮಠ, ಮಾಲತೇಶ ಕುಲಕರ್ಣಿ, ಕೇದಾರೆಪ್ಪ ಜೋಗಿ, ಮಹಿಪತಿ ರಾಶಿನಕರ ಇತರರು ಇದ್ದರು.
ಕಲಾ ತಂಡದ ಮನವಿ: 81ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಜರುಗಿಸಬೇಕೆಂದು ಸವಣೂರು ತಾಲೂಕು ಮಂತ್ರೋಡಿ ಬಸವೇಶ್ವರ ಸಾಂಸ್ಕೃತಿಕ ಕಲಾ ತಂಡ ಆಗ್ರಹಿಸಿದೆ. ತಂಡದ ಅಧ್ಯಕ್ಷ ಚಂದ್ರು ಚಾಕಲಬ್ಬಿ ಇತರರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement