ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಹಕಾರ ತತ್ವದಿಂದ ಪ್ರಜಾಪ್ರಭುತ್ವಕ್ಕೆ ಬಲ

Vishwanath S
Updated On : 16 Jun 2014, 10:44 am

ಹಾವೇರಿ: ಸಹಕಾರ ಮತ್ತು ಸರ್ಕಾರ ಜತೆಜತೆಯಾಗಿ ನಡೆದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಂಡು ಸುಗಮವಾಗಿ ಸಾಗಲು ಸಾಧ್ಯ. ಸಹಕಾರಿ ರಂಗ ಸರ್ಕಾರವನ್ನು ಆಳುವಂತಾಗಬೇಕು. ಎಲ್ಲರೂ ಸಹಕಾರಿ ತತ್ವ ಅಳವಡಿಸಿಕೊಂಡು ಸಹಕಾರಿ ಸಂಘಗಳ ಶ್ರೇಯೋಭಿವೃದ್ಧಿಗೆ ಪಣತೊಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ಶನಿವಾರ ಶಿವಬಸವ ನಗರದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಜನರಲ್ಲಿ ಸಹಕಾರಿ ಮನೋಭಾವನೆ ಮೂಡಿದಾಗ ಮಾತ್ರ ಸಹಕಾರಿ ಸಂಘ, ಸಂಸ್ಥೆಗಳು ಉಳಿದು, ಬೆಳೆದು ಬರಲು ಸಾಧ್ಯ. ಸಾಮಾನ್ಯ ವ್ಯಕ್ತಿ ಕೂಡ ಸಹಕಾರಿ ಸಂಘದ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಜಿಲ್ಲಾ ಸಹಕಾರಿ ಯೂನಿಯನ್‌ಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಸಂಸದರ ನಿಧಿಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ನೂರು ವರ್ಷಗಳ ಇತಿಹಾಸ ಇರುವ ಸಹಕಾರಿ ಸಂಘ ಇಂದು ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ರಂಗದಲ್ಲಿಯೂ ಸಹಕಾರಿ ಛಾಪನ್ನು ಮೂಡಿಸಬೇಕಿದೆ. ಸಹಕಾರಿ ರಂಗ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಅಂದಾಗ ಸಹಕಾರಿ ಸಂಘಗಳ ಉಳಿವು ಸಾಧ್ಯ. ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುವಲ್ಲಿ ಹಾವೇರಿ ಜಿಲ್ಲೆ ಮುಂಚೂಣಿಯಲ್ಲಿದೆ. ಆದ್ದರಿಂದ ಜಿಲ್ಲಾ ಕೇಂದ್ರದಲ್ಲಿ ಸ್ವತಂತ್ರ ಕೆಎಂಎಫ್ ಸ್ಥಾಪನೆಗೆ ಹಾಗೂ ಕೆಸಿಸಿ ಬ್ಯಾಂಕ್ ಸ್ಥಾಪನೆಗೆ ರೈತರು ಮನಸ್ಸು ಮಾಡಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿದರು. ರಾಜ್ಯ ಸಹಕಾರಿ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ವೀರೇಶ, ರಾಜ್ಯ ಸೌಹಾರ್ದ ಸಹಕಾರಿ ಮಹಾಮಂಡಳದ ನಿರ್ದೇಶಕ ಎಂ.ಬಿ. ಕಲಾಲ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು.
ಹರಸೂರು ಬಣ್ಣದ ಮಠದ ಅಭಿನವ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ, ಮಾಜಿ ಶಾಸಕ ನೆಹರೂ ಓಲೇಕಾರ, ಶಿವರಾಜ ಸಜ್ಜನರ, ಧಾರವಾಡ ಕೆಎಂಎಫ್ ನಿರ್ದೇಶಕ ಬಸವರಾಜ ಅರಬಗೊಂಡ, ಭಾವಲಿಂಗಯ್ಯ ಹಿರೇಮಠ, ಶಂಭಣ್ಣ ಬಸೇಗಣ್ಣಿ, ಎಸ್.ಎಂ. ಪಾಟೀಲ ಇತರರು ಇದ್ದರು.
ಮಲ್ಲಿಕಾರ್ಜುನ ಸಾತೇನಹಳ್ಳಿ ಸ್ವಾಗತಿಸಿದರು. ಕೆ.ಆರ್. ಹಿರೇಮಠ ನಿರೂಪಿಸಿದರು. ಆನಂದ ತಳವಾರ ವಂದಿಸಿದರು.
ಜನರಲ್ಲಿ ಸಹಕಾರಿ ಮನೋಭಾವನೆ ಮೂಡಿದಾಗ ಮಾತ್ರ ಸಹಕಾರಿ ಸಂಘ, ಸಂಸ್ಥೆಗಳು ಉಳಿದು, ಬೆಳೆದು ಬರಲು ಸಾಧ್ಯ. ಸಾಮಾನ್ಯ ವ್ಯಕ್ತಿ ಕೂಡ ಸಹಕಾರಿ ಸಂಘದ ಸದುಪಯೋಗ ಪಡೆದುಕೊಳ್ಳಬೇಕು.
- ಶಿವಕುಮಾರ ಉದಾಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement