ಬೇ ಬಾಕಿ ಪತ್ರಕ್ಕಾಗಿ ಬ್ಯಾಂಕ್‌ನಿಂದ ಲಂಚ: ಪ್ರತಿಭಟನೆ
ರಾಣಿಬೆನ್ನೂರು: ಬ್ಯಾಂಕ್‌ಗಳಲ್ಲಿ ಸಾಲವಿಲ್ಲವೆಂದು (ಬೇ ಬಾಕಿ) ಪ್ರಮಾಣಪತ್ರ ನೀಡುವುದಕ್ಕಾಗಿ ರೈತರಿಂದ ಲಂಚ ಪಡೆಯುತ್ತಿರುವ ಬ್ಯಾಂಕ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಕಡೂರು ಮಾತನಾಡಿ, ರೈತರು ತಮ್ಮ ಜಮೀನುಗಳ ಮೇಲೆ ಕಂದಾಯ ಗ್ರಾಮಗಳ ವ್ಯಾಪ್ತಿಗೊಳಪಟ್ಟ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕು. ಹೀಗಾಗಿ ಇತರೆ ಬ್ಯಾಂಕ್‌ಗಳಲ್ಲಿ (ಬೇ ಬಾಕಿ ಪತ್ರ) ಸಾಲವಿಲ್ಲವೆಂದು ಪ್ರಮಾಣಪತ್ರ ತರಬೇಕು. ಈ ಬೇ ಬಾಕಿ ಪತ್ರ ನೀಡುವುದಕ್ಕಾಗಿ ಬ್ಯಾಂಕಿನ ಅಧಿಕಾರಿಗಳು ಪ್ರತಿ ರೈತರಿಂದ ರು. 100ರಿಂದ 150ರ ವರೆಗೆ ಲಂಚ ಪಡೆಯುತ್ತಿದ್ದಾರೆ. ಆದ ಕಾರಣ ಬೇ ಬಾಕಿ ಪ್ರಮಾಣಪತ್ರ ನೀಡುವುದಕ್ಕಾಗಿ ರೈತರಿಂದ ಲಂಚ ಪಡೆಯುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಿರತ ರೈತರು ಆಗ್ರಹಿಸಿದರು. ಎಲ್ಲ ರೈತರು ಬಿತ್ತನೆ ಕಾರ್ಯ ಮುಕ್ತಾಯಗೊಳಿಸುವವರೆಗೂ ಬೆಳೆ ವಿಮೆ ತುಂಬಿಸಿಕೊಳ್ಳುವುದನ್ನು ಸ್ಥಗಿತಗೊಳಿಸಬೇಕು. ಬೆಳೆ ವಿಮೆ ತುಂಬುವುದಕ್ಕಾಗಿ ಬ್ಯಾಂಕ್‌ಗೆ ಬರುವ ರೈತರಿಂದ ಇಲ್ಲಸಲ್ಲದ ಕಾಗದ ಪತ್ರಗಳನ್ನು ಕೇಳುವ ಬದಲು ಬೆಳೆ ವಿಮೆ ತುಂಬುವ ಜಮೀನಿನ ಅ ಖಾತೆ ಉತಾರ ಹಾಗೂ ಜಮೀನಿನ ಪಹಣಿ ಪತ್ರಿಕೆಯ ಜೊತೆಗೆ ರೈತರಿಂದ ಬಿಳಿಯ ಹಾಳೆಯ ಮೇಲೆ ಅರ್ಜಿ ಬರೆಯಿಸಿಕೊಂಡು ರೈತರಿಂದ ಬೆಳೆ ವಿಮೆಯ ಪ್ರೀಮಿಯಂ ಹಣ ತುಂಬಿಸಿಕೊಳ್ಳಲು ಬ್ಯಾಂಕ್ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಾದ್ಯಂತ ಕಳೆದ ವರ್ಷ ಕನಕ ನಿಕ್ಕಿ ಪ್ಲಸ್ ಹತ್ತಿಬಿತ್ತಿ ಹಾನಿಗೊಳಗಾದ ರೈತರಿಗೆ ಸರ್ಕಾರದಿಂದ ನೀಡಬೇಕಾಗಿರುವ ಸುಮಾರು ರು. 2.19 ಕೋಟಿ ಹಣ ಬ್ಯಾಂಕ್‌ಗಳಿಗೆ ಬಿಡುಗಡೆಗೊಳಿಸಿರುವುದಾಗಿ ಸಂಬಂಧಿಸಿದ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ತಮಗೆ ತಿಳಿಸಿದ್ದು, ಹಣ ಪಡೆದಿರುವ ಬ್ಯಾಂಕ್ ಅಧಿಕಾರಿಗಳು ಇಲ್ಲಿಯವರೆಗೂ ಸಂಬಂಧಿಸಿದ ರೈತರ ಖಾತೆಗೆ ಹಣವನ್ನು ಜಮಾ ಮಾಡಿಲ್ಲ. ಸರ್ಕಾರ ರೈತರಿಗೆ ನೀಡಬೇಕಾಗಿರುವ ಹಣವನ್ನು ಪಡೆದಿರುವ ಬ್ಯಾಂಕ್ ಅಧಿಕಾರಿಗಳು ಸಂಬಂಧಿಸಿದ ರೈತರ ಖಾತೆಗಳಿಗೆ ನೀಡದಿದ್ದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಕಡೂರು ಎಚ್ಚರಿಸಿದರು. ತಾಲೂಕು ರೈತ ಸಂಘದ ಕಾರ್ಯದರ್ಶಿ ದಿಳ್ಳೆಪ್ಪ ಕಂಬಳಿ, ಖಜಾಂಚಿ ಸುರೇಶಪ್ಪ ದುಳೆಹೂಳಿ, ಮಲ್ಲಿಕಾರ್ಜುನ ಅಣ್ಣಪ್ಪಳವರ, ಶಂಕರಪ್ಪ ಮೀಣಸಿನಹಾಳ, ಲೋಕೇಶ ಸುತಾರ, ಪ್ರಕಾಶ ದೇಸಾಯಿ, ದೇವೇಂದ್ರಪ್ಪ ಓಲೇಕಾರ, ಮಳಪ್ಪ ಮೇಲ್ಮಾಳಗಿ, ನಿಂಗಾಚಾರಿ ಅರ್ಕಾಚಾರಿ, ಶರೀಪಸಾಬ್ ಇದ್ದರು.
ತಾಪಂ ಇಒಗೆ ತರಾಟೆ
ರಾಣಿಬೆನ್ನೂರು: ರೈತರು ದನದ ದೊಡ್ಡಿ ನಿರ್ಮಿಸಿಕೊಂಡಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಣ ನೀಡುವುದಾಗಿ ತಿಳಿಸಿದ್ದ ನೀವು ದನದ ದೊಡ್ಡಿ ನಿರ್ಮಿಸಿಕೊಂಡಿರುವರಿಗೆ ಏಕೆ ಹಣ ನೀಡುತ್ತಿಲ್ಲವೆಂದು ದನದ ದೊಡ್ಡಿ ನಿರ್ಮಿಸಿಕೊಂಡಿರುವ ರೈತರು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ತಾಪಂ ಆವರಣದಲ್ಲಿ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಸಂಚಾಲಕ ಲೋಕೇಶ ಸುತಾರ ಮಾತನಾಡಿ, ಅಧಿಕಾರಿಗಳು ನೀಡಿದ್ದ ಭರವಸೆ ಮೇರೆಗೆ ತಾಲೂಕಿನ 35 ಗ್ರಾಪಂ ವ್ಯಾಪ್ತಿಯ 105 ಹಳ್ಳಿಗಳ ಸಾವಿರಾರು ರೈತರು ದನದ ದೊಡ್ಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಣ ನೀಡುವುದಾಗಿ ಭರವಸೆ ನೀಡಿರುವ ಅಧಿಕಾರಿಗಳು ಹಣ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಲೋಕೇಶ ಸುತಾರ ತಾಪಂ ಕಾರ್ಯನಿರ್ವಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈತ ಮುಖಂಡರ ಹಾಗೂ ಅಧಿಕಾರಿಗಳ ಮಧ್ಯ ಮಾತಿನ ಚಕಮಕಿ ನಡೆಯಿತು. ನಂತರ ಅಧಿಕಾರಿಗಳು ಭರವಸೆಯಿಂದ ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು. ಕಮದೋಡ, ಚಳಗೇರಿ, ಕರೂರು, ಹಲಗೇರಿ, ಹೊನ್ನತ್ತಿಸಕೋಡಿಯಾಲ, ಬೆನಕನಕೊಂಡ ಹಾಗೂ ರಾಹುತನಕಟ್ಟಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರೈತರು ಪ್ರತಿಭಟನೆಯಲ್ಲಿದ್ದರು.