ಆತ್ಮಸಾಕ್ಷಿಗೆ ವಿರುದ್ಧ ಕೆಲಸ ಬೇಡ: ಸುಮಾ
ಬ್ಯಾಡಗಿ: ಆತ್ಮಸಾಕ್ಷಿಗೆ ವಿರುದ್ಧವಾಗಿ ಶಿಕ್ಷಕರು ಕೆಲಸ ನಿರ್ವಹಿಸುವುದು ವೃತ್ತಿಗೆ ಕಳಂಕ, ನಗರ ಗ್ರಾಮೀಣ ಎಂದು ಪ್ರತ್ಯೇಕಿಸದೇ ಗ್ರಾಮೀಣ ಪ್ರದೇಶದಲ್ಲಿನ ಪ್ರತಿಭೆ ಗುರುತಿಸುವ ಕಾರ್ಯ ಶಿಕ್ಷಕರಿಂದ ಆಗಬೇಕಾಗಿದೆ ಎಂದು ಸಮನ್ವಯಾಧಿಕಾರಿ ಜಿ. ಸುಮಾ ಅಭಿಪ್ರಾಯಪಟ್ಟರು.
ತಾಲೂಕಿನ ಕುಮ್ಮೂರು ಗ್ರಾಮದ ಫಾಸಿ ಪ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮುತ್ತಕ್ಕ ಕುಮ್ಮೂರು ಮಾತನಾಡಿದರು.ಇದೇ ಸಂದರ್ಭ 2013-14ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಫಾಸಿ ದಂಪತಿ ಕೊಡಮಾಡಿದ ರು. 10 ಸಾವಿರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಎಸ್‌ಡಿಎಂಸಿ ಉಪಾಧ್ಯಕ್ಷ ಅಶೋಕ ಹಿರೇಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಭೂದಾನಿ ನೀಲಕಂಠಪ್ಪ ಫಾಸಿ, ಗ್ರಾಪಂ ಉಪಾಧ್ಯಕ್ಷ ಬಸವಣ್ಣೆಪ್ಪ ದೊಡ್ಡಮ್ಮನವರ, ಚನ್ನಬಸಪ್ಪ ದಾಸರ, ರೇಣುಕಾ ಕೊಡ್ಲಿ, ನಾಗರಾಜ ಹರಿಜನ, ಎಚ್.ಟಿ. ಸತ್ಯಪ್ರಕಾಶ, ಪಿ. ರಮೇಶ, ಗುಡ್ಡೇಶ ಫಾಸಿ, ಮುಖ್ಯ ಶಿಕ್ಷಕ ಜೀವರಾಜ ಛತ್ರದ ಇದ್ದರು. ಟಿ.ಸಿ. ಚಂದ್ರಶೇಖರ ಸ್ವಾಗತಿಸಿದರು. ಸಂಜೀವ ದಾದುಗೋಳ ವಂದಿಸಿದರು.
ತಾಂಡಾ ಪರಿವರ್ತನೆಗೆ ತಜ್ಞರ ಭೇಟಿ ಇಂದು
ಹಾವೇರಿ: ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು ತಜ್ಞರ ಸಮಿತಿ ಜೂ. 27ರಂದು ಜಿಲ್ಲೆಗೆ ಭೇಟಿ ನೀಡಲಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಸಂಬಂಧವಾಗಿ ಸರ್ಕಾರ ನೇಮಿಸಿದ 4 ತಜ್ಞರ ಸಮಿತಿಯು ಅಂದು ಬೆಳಗ್ಗೆ 10 ಗಂಟೆಗೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಸಭೆ ನಡೆಸಲಿದೆ. ಶಾಸಕ ರುದ್ರಪ್ಪ ಲಮಾಣಿ ಪಾಲ್ಗೊಳ್ಳುವರು ಎಂದು ರಮೇಶ ಲಮಾಣಿ ಕೋರಿದ್ದಾರೆ.