ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಸಿರಿನಿಂದ ಹಳದಿ ವಲಯಕ್ಕೆ ತರುವೆ

Rashmi Kasaragodu
Updated On : 29 Jun 2014, 2:00 am

ಹಾವೇರಿ: ಹಿಂದೆ ಆಡಳಿತ ನಡೆಸಿದವರ ನಿರ್ಲಕ್ಷ್ಯದಿಂದ ಅನೇಕ ವಸತಿ ಬಡಾವಣೆಗಳು ಹಸಿರು ವಲಯದಲ್ಲೇ ಇವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಹಸಿರು ವಲಯದ ಬಡಾವಣೆಗಳನ್ನು ಹಳದಿ ವಲಯಕ್ಕೆ ತರುವುದು ತಮ್ಮ ಪ್ರಥಮ ಆದ್ಯತೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಭರವಸೆ ನೀಡಿದರು.
ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರಕ್ಕೆ ಕಳೆದ ಒಂದೂವರೆ ವರ್ಷದಿಂದ ನಾಮನಿರ್ದೇಶನ ಅಧ್ಯಕ್ಷರು ಹಾಗೂ ಸದಸ್ಯರಿರಲಿಲ್ಲ. ಅಲ್ಲದೆ, ನಗರ ಅಭಿವೃದ್ಧಿ ಯೋಜನೆ (ಸಿಟಿ ಡೆವಲಪ್‌ಮೆಂಟ್ ಪ್ಲಾನ್) ಇರಲಿಲ್ಲ. ಆದ್ದರಿಂದ ಅನೇಕ ವಸತಿ ಬಡಾವಣೆಗಳು ಹಸಿರು ವಲಯದಲ್ಲೇ ಉಳಿಯುವಂತಾಗಿದೆ. ಅದನ್ನು ಹಳದಿ ವಲಯಕ್ಕೆ ತರುವ ಕುರಿತಂತೆ ಈಗಾಗಲೇ ಮೇಲಧಿಕಾರಿಗಳು, ಶಾಸಕರೊಂದಿಗೆ ಚರ್ಚಿಸಿದೆ ಎಂದು ಅವರು ತಿಳಿಸಿದರು.
1999ರಲ್ಲಿ ಪ್ರಾಧಿಕಾರ ರಚನೆಯಾದ ಸಂದರ್ಭ ಬಡ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ವಸತಿ ನಿವೇಶನ ನೀಡುವ ಉದ್ದೇಶದಿಂದ ಸುಮಾರು 1 ಸಾವಿರ ಜನರಿಂದ ಹಣ ಕಟ್ಟಿಸಿಕೊಳ್ಳಲಾಗಿತ್ತು. ಆದರೆ, ಅವರಿಗೆ ಇನ್ನೂ ಮನೆ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಜನರಿಗೆ ಅನುಕೂಲ ಕಲ್ಪಿಸಲು ವಸತಿ ಬಡಾವಣೆ ನಿರ್ಮಿಸಿ ನೀಡಲು ಕ್ರಮ ಕೈಗೊಳ್ಳಲಾಗುವುದು.
ಪ್ರಾಧಿಕಾರದಲ್ಲಿ ರು. 4 ಕೋಟಿ ಹಣವಿದ್ದು, ಅದರಲ್ಲಿ ನಗರದ ಅಭಿವೃದ್ಧಿಗೆ ಸಮರ್ಪಕ ಯೋಜನೆ ತಯಾರಿಸಿ ಕಾರ್ಯರೂಪಕ್ಕೆ ತರಲಾಗುವುದು. ಉದ್ಯಾನವನ ಅಭಿವೃದ್ಧಿ ಸೇರಿದಂತೆ ನಗರಸಭೆಯೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು. ನಗರಕ್ಕೆ ವರ್ತುಲ ರಸ್ತೆ ಅಗತ್ಯವಿದ್ದು, ಈ ನಿಟ್ಟಿನಲ್ಲಿಯೂ ಪ್ರಾಧಿಕಾರ ಕಾರ್ಯೋನ್ಮುಖವಾಗಲಿದೆ ಎಂದು ನೀರಲಗಿ ತಿಳಿಸಿದರು.
ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಹೂವಿನ ಹಾಸಿಗೆಯಲ್ಲ. ಅನೇಕ ಸಮಸ್ಯೆ ಹಾಗೂ ಸವಾಲು ಎದುರಿಸಿ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಸಂಜೀವ ನೀರಲಗಿ ಸಮರ್ಥರಿದ್ದು, ಅವರಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ಸಿಗುವ ಭರವಸೆಯಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಎಂ.ಎಂ. ಹನುಮನಹಳ್ಳಿ, ಸಿ.ಎಸ್. ಲಕ್ಷ್ಮೇಶ್ವರಮಠ, ಸಂಜಯ ಮಾಗಾವಿ, ಹೆಗ್ಗರಮ್ಮ ಕೋರಿಕೊಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement