ಹೊರೆಯಾದರೂ ಯೋಜನೆಗೆ ಬದ್ಧ: ಹೆಬ್ಬಾರ
ಮುಂಡಗೋಡ: ಬೇರೆ ರಾಜ್ಯಗಳಿಂದ ಖರೀದಿಸುವ ಅಕ್ಕಿ ಇಲ್ಲಿಗೆ ಬಂದು ತಲುಪಬೇಕಾದರೆ ರು. 44 ಭರಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಕೇವಲ ರು. 1ಗೆ ನೀಡುತ್ತಿದೆ. ಇದರಿಂದ ಪ್ರತಿ ತಿಂಗಳು ಈ ಯೋಜನೆಯಿಂದ ಸರ್ಕಾರದ ಮೇಲೆ ರು. 480 ಕೋಟಿ ಹೊರೆಯಾದರೂ ಬಡತನದ ಹಸಿವು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಇಂಥ ಯೋಜನೆಗೆ ಬದ್ಧವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಪಡಿತರ ಚೀಟಿ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಿ ಮಾತನಾಡಿದರು. ಸರ್ಕಾರ ಬಡತನ ನೀಗಿಸಲು ರು. ಕೋಟ್ಯಂತರ ವೆಚ್ಚ ಮಾಡುತ್ತಿದೆ. ಅನ್ನ ಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಇದನ್ನು ದುರುಪಯೋಗಪಡಿಸಿಕೊಂಡಲ್ಲಿ ಪಡಿತರ ಚೀಟಿ ರದ್ದಾಗುತ್ತದೆ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳುವಂತೆ ಕರೆ ನೀಡಿದರು. ಸ್ವಲ್ಪ ಲೋಪದೋಷಗಳಾಗಬಹುದು ಮುಂದಿನ ದಿನಗಳಲ್ಲಿ ಎಲ್ಲ ಸರಿಹೋಗಲಿದೆ ಎಂದು ಹೇಳಿದರು.