ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಿರಾಸೆ ತಂದ ಜನಸ್ಪಂದನ

Vishwanath S
Updated On : 2 Mar 2014, 11:48 am

ಬ್ಯಾಡಗಿ: ದೂರು ಸಲ್ಲಿಸಲು ಜನರಿಲ್ಲದ್ದರಿಂದ ಬೇಸತ್ತ ಅಧಿಕಾರಿಗಳು ಶಾಲೆ ವಿಸರ್ಜಿಸಿ ಮಕ್ಕಳೆದುರು ವಿವಿಧ ಇಲಾಖೆ ಪ್ರಗತಿ ವಾಚಿಸಿ ಮರಳಿದ ಪ್ರಸಂಗ ಶುಕ್ರವಾರ ಕಾಸಂಬಿಯಲ್ಲಿ ನಡೆದ ಕಾಗಿನೆಲೆ ಹೋಬಳಿ ಮಟ್ಟದ ಜನಸ್ಪಂದನದಲ್ಲಿ ಜರುಗಿತು.
ಸ್ಥಗಿತಗೊಂಡ ತರಗತಿಗಳು: ಮೊದಲಿನ ಪದ್ಧತಿಯಂತೆ ಪ್ರತಿ ತಿಂಗಳ ಮೊದಲನೇ ಶನಿವಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಬಹುತೇಕ ಕಾರ್ಯಕ್ರಮಗಳು ಶಾಲಾ ಆವರಣದಲ್ಲೇ ಆಯೋಜನೆ ಆಗುವುದರಿಂದ ಬೆಳಗಿನ ಶಾಲೆ ಮುಗಿಸಿ ಮಕ್ಕಳು ಮನೆಗಳಿಗೆ ತೆರಳಿದ ಬಳಿಕ ಜನಸ್ಪಂದನ ಪ್ರಾರಂಭಿಸಲಾಗುತ್ತಿತ್ತು. ಹೀಗಾಗಿ ಕಾರ್ಯಕ್ರಮದಿಂದ ಯಾವುದೇ ತೊಂದರೆ ಆಗುತ್ತಿರಲಿಲ್ಲ
ಆದರೆ, ಪ್ರಥಮ ಬಾರಿಗೆ ಶುಕ್ರವಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದೇ ಎಡವಟ್ಟಿಗೆ ಕಾರಣ. ಶಾಲಾ ಅವಧಿ ಲೆಕ್ಕಿಸದೇ ಜನಸ್ಪಂದನ ಪ್ರಾರಂಭಿಸಿದ್ದರಿಂದ ಧ್ವನಿವರ್ಧಕದ ಶಬ್ದಕ್ಕೆ ತರಗತಿ ಸ್ಥಗಿತಗೊಳಿಸಿದ ಶಿಕ್ಷಕರು ಮಕ್ಕಳೊಂದಿಗೆ ಜನಸ್ಪಂದನದಲ್ಲಿ ಪಾಲ್ಗೊಂಡರು, ಸ್ವತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲೇ ಇಂಥ ಘಟನೆ ನಡೆದರೂ ಯಾವುದೇ ಕ್ರಮ ಜರುಗಿಸಲು ಮುಂದಾಗಲಿಲ್ಲ.
ರದ್ದಾಗಲಿಲ್ಲ ಸಭೆ: ಸಾರ್ವಜನಕರಿಲ್ಲದೇ ಬಿಕೋ ಎನ್ನುತ್ತಿದ್ದ ಜನಸ್ಪಂದನವನ್ನು ರದ್ದು ಮಾಡುವ ಗೋಜಿಗೆ ಹೋಗದ ಅಧಿಕಾರಿಗಳು, ಶತಾಯಗತಾಯ ಜನಸ್ಪಂದನ ಕಾರ್ಯಕ್ರಮ ಮುಗಿಸಬೇಕೆಂಬ ಮನಸ್ಥಿತಿಗೆ ಬಂದರು. ಇದರಿಂದ ಬೆರಳೆಣಿಕೆಯಷ್ಟಿದ್ದ ಗ್ರಾಮಸ್ಥರಿಗೆ ಹಾಗೂ ಶಾಲಾ ಮಕ್ಕಳಿಗೆ ಪ್ರಗತಿಯ ವಿವರಗಳನ್ನು ನೀಡಿದರು. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರ ನೀಡಬೇಕಾದ ಮಹತ್ವಪೂರ್ಣ ಕಾರ್ಯಕ್ರಮ ನಾಮಕೆವಾಸ್ತೆಗೆ ನಡೆದಂತಾಯ್ತು.
ಟಿಈಓ ವಿಷಾದ: ಇರುವಷ್ಟೇ ಜನರಿಗೆ ಪಾಠ ಮಾಡಲು ಶುರು ಮಾಡಿದ ಟಿಈಓ ಎಸ್.ಆರ್. ಪಾಟೀಲ ಮಾತನಾಡಿ, ಸಾರ್ವಜನಿಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ ಸರ್ಕಾರ ಜನಸ್ಪಂದನ ಸಭೆ ನಡೆಸುವ ಮೂಲಕ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿದೆ. ಆದರೆ, ಇಂತಹ ಸಭೆಗಳಿಗೆ ಗ್ರಾಮಸ್ಥರು ನಿರುತ್ಸಾಹ ತೋರುತ್ತಿರುವುದು ವಿಷಾದನೀಯ ಎಂದರು.
ಗ್ರಾಪಂ ಅಧ್ಯಕ್ಷೆ ಶಿವಕ್ಕ ಮುದ್ದಿನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಇಲಾಖಾಧಿಕಾರಿಗಳಾದ ನಟರಾಜ, ಚಿದಾನಂದ, ಎಂ. ಅಣ್ಣಪ್ಪ, ಡಾ.ನಾಗರಾಜ, ಹಾಲೇಶ ನಾಯ್ಕ, ಜಿ.ಟಿ. ಶಿರೋಳ್ಕರ, ಎಚ್.ಎನ್. ದಾವಣಗೆರೆ, ವೈ.ಎಂ. ಹಿರಿಯಕ್ಕನವರ, ಎಸ್.ವಿ. ಬಿದರಿ, ಗ್ರಾಪಂ ಸದಸ್ಯರಾದ ಚನ್ನಪ್ಪ ಕಾಕೋಳ, ಯಲ್ಲಪ್ಪ ನಿಂಗಾಪುರ, ಫಕ್ಕೀರಪ್ಪ ಸಂಜೀವಣ್ಣನವರ, ಎಸ್ಡಿಎಂಸಿ ಅಧ್ಯಕ್ಷ ಕೆ.ಜಿ. ಕೋಟಿ, ಕಂದಾಯ ನಿರೀಕ್ಷಕ ಆರ್.ವೈ. ಬೋಗಾರ, ಉಪತಹಸೀಲ್ದಾರ್ ಜಿ.ಎನ್. ಶೆಟ್ಟರ, ಪಿಡಿಓ ಈರಣ್ಣ, ಶಿಕ್ಷಕ ಆರ್.ಆರ್. ಬೆನ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement