ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಸ್ತೆ ಕಾಮಗಾರಿಗೆ ಶಾಸಕ ಬಣಕಾರ ಚಾಲನೆ

Vishwanath S
Updated On : 2 Mar 2014, 11:47 am

ಹಿರೇಕೆರೂರು: ಲೋಕೋಪಯೋಗಿ ಇಲಾಖೆಯಿಂದ ಕೇಂದ್ರ ರಸ್ತೆ ಯೋಜನೆ ಅಡಿಯಲ್ಲಿ ರು. 2.50 ಕೋಟಿ ಮೊತ್ತದಲ್ಲಿ ರಸ್ತೆ ಕಾಮಗಾರಿ ನಡೆಯಲಿದ್ದು, ಇಲ್ಲಿನ ನಿವಾಸಿಗಳು ರಸ್ತೆ ಕಾಮಗರಿಯ ಗುಣಮಟ್ಟ ತಿಳಿದುಕೊಳ್ಳಬೇಕು ಹಾಗೂ ಗುತ್ತಿಗೆದಾರರು ಕಾಮಗಾರಿ ಕಳಪೆಯಾಗದಂತೆ ಪೂರೈಸಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು. ತಾಲೂಕಿನ ನಿಂಗಾಪುರ ಗ್ರಾಮದ ಬಳಿ ಗಜೇಂದ್ರಗಡ- ಸೊರಬ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭ ತಾಪಂ ಸ್ಥಾಯಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ, ಸದಸ್ಯ ಬಸನಗೌಡ ಕಳ್ಳೇರ, ಪ್ರಭು ಮಳವಳ್ಳಿ, ಷಣ್ಣುಖ ಮಳಿಮಠ. ಎಸ್.ಸಿ. ಕಬ್ಬಿಣಕಂಥಿಮಠ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಂಭ್ರಮದ ಬಂಗಾರ ಬಸವೇಶ್ವರ ರಥೋತ್ಸವ
ಶಿಗ್ಗಾಂವಿ: ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ತಾಲೂಕಿನ ಬಂಕಾಪುರ ಪಟ್ಟಣದ ಕೊಟ್ಟಿಗೇರಿ ಬಂಗಾರ ಬಸವೇಶ್ವರ 29ನೇ ವರ್ಷದ ರಥೊತ್ಸವ ನೂರಾರು ಭಕ್ತರ ಮಧ್ಯೆ ಸಡಗರ, ಸಂಭ್ರಮದಿಂದ ಶುಕ್ರವಾರ ನಡೆಯಿತು. ಬಂಕಾಪುರ ಅರಳೇಲೆ ಹಿರೇಮಠದ ಪಟ್ಟಾಧ್ಯಕ್ಷರಾದ ರೇವಣಶಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥದಲ್ಲಿ ಬಂಗಾರ ಬಸವೇಶ್ವರನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಹೂವು, ಧಾರ್ಮಿಕ ವಿಧಿ, ವಿಧಾನಗಳಲ್ಲಿ ಶೃಂಗಾರಗೊಳಿಸಲಾಗಿತ್ತು. ದಾರಿಯುದ್ದಕ್ಕೂ ಸಂಚರಿಸಿದ ರಥಕ್ಕೆ ಭಕ್ತರು ಭಕ್ತಿ, ಭಾವದಿಂದ ನಮಿಸಿ ಕೃತಾರ್ಥರಾದರು. ಸ್ತ್ರೀಯರು ರಥಕ್ಕೆ ಆರತಿಗೈದರು. ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ
ಬ್ಯಾಡಗಿ: ಡಾ.ಸಿ.ವಿ.ರಾಮನ್ ಭೌತವಿಜ್ಞಾನದ ಬಗ್ಗೆ ಅವರು ಬರೆದ 300ಕ್ಕೂ ಹೆಚ್ಚು ಲೇಖನಗಳು ವಿಶ್ವಮನ್ನಣೆ ಗಳಿಸಿವೆ ಎಂದು ಎಚ್.ಜಿ. ಸುಮಂಗಲಾ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಎಸ್.ಎಸ್.ಪಿ.ಎನ್. ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಬೆಳಕಿನ ಚದುರುವಿಕೆಯ ಮೇಲೆ ಬೆಳಕು ಚೆಲ್ಲಿದ ಸಿ.ವಿ. ರಾಮನ್ರು ದೇಶಕಂಡ ಅಪ್ರತಿಮ ಹಾಗೂ ಏಷ್ಯಾ ಖಂಡದಲ್ಲಿಯೇ ಪ್ರಥಮ ನೋಬಲ್ ಪ್ರಶಸ್ತಿ ಗಳಿಸಿದ ವಿಜ್ಞಾನಿಗಳಾಗಿದ್ದಾರೆ. ಇಂಥ ಮಹಾನ್ ವಿಜ್ಞಾನಿ ನಮ್ಮ ದೇಶದ ವಿಜ್ಞಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ವಿಜ್ಞಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉಪಪ್ರಾಚಾರ್ಯ ಎಂ.ಕೆ. ಹೊಸಮನಿ ಮಾತನಾಡಿದರು. ಗೌರಮ್ಮ ಅಂಕಲಕೋಟಿ, ಅನ್ನಪೂರ್ಣಾ ಕರ್ಜಗಿ ಉಪಸ್ಥಿತರಿದ್ದರು. ಡಿ.ಎನ್. ಸವಿತಾ ಸ್ವಾಗತಿಸಿದರು. ಕವಿತ ಹೊರಟ್ಟಿ ವಂದಿಸಿದರು.

ನಾಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಗುರುತಿನ ಚೀಟಿ
ಹಿರೇಕೆರೂರು: ಯುವ ಕಾಂಗ್ರೆಸ್ ಬೂತ್ ಮಟ್ಟದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಮಾ. 3ರಂದು ಬೆಳಗ್ಗೆ 10ಕ್ಕೆ ಮಾಜಿ ಶಾಸಕ ಬಿ.ಸಿ. ಪಾಟೀಲ ಅವರ ನಿವಾಸ ಸೇವಕದಲ್ಲಿ ಜರುಗಲಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಅಸ್ಲಂ ಹಿರೇಕೆರೂರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಹಿರೇಕೆರೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಚೀಟಿ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಬಿ.ಸಿ. ಪಾಟೀಲ ವಹಿಸುವರು. ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ನಾಸೀರಖಾನ್ ಪಠಾಣ, ಉಪಾಧ್ಯಕ್ಷ ಮಂಜುನಾಥ ಮುಳುಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ ಪ್ಯಾಟಿ, ತಾಲೂಕಿನ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು  ಪಾಲ್ಗೊಳ್ಳುವರು. ಕಾರಣ ಎಲ್ಲ ಯುವ ಕಾಂಗ್ರೆಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನ
ಬ್ಯಾಡಗಿ: ತಾಲೂಕಿನ ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಶಿಕ್ಷಕ ಎಂ.ಎಂ. ಪಾಟೀಲ ವೈಜ್ಞಾನಿಕ ಬೆಳವಣಿಗೆ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕೆ ವಿನಾ ವಿನಾಶಕ್ಕಲ್ಲ. ಎರಡನೇ ಮಹಾಯುದ್ಧದಲ್ಲಿ ಪ್ರದರ್ಶನಗೊಂಡ ಅಣುಬಾಂಬ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತಲ್ಲದೇ, ಅಲ್ಲಿನ ಜನರ ಜನಜೀವನವನ್ನು ಅಸ್ಥಿರಗೊಳಿಸಿತು. ವಿಜ್ಞಾನದ ದುಷ್ಪರಿಣಾಮಕ್ಕೆ ಇದೊಂದು ಉತ್ತಮ ಉದಾಹರಣೆ ಎಂದರು. ಇದಕ್ಕೂ ಮುನ್ನ ಕಾರ್ಯಕ್ರಮದ ಕುರಿತು ವಿಜ್ಞಾನ ಶಿಕ್ಷಕ ಸೆಲ್ವರಾಜನ್ ಪ್ರಾಸ್ತಾವಿಕ ಮಾತನಾಡಿದರು. ನಿರ್ಮಲಾ ಸೊರಟೂರು, ಕವಿತಾ ಆಲೂರ, ಸುಮಂಗಲ ಸೊರಟೂರ, ಸವಿತಾ ಗುರುನಾಯಕ್, ಕೆ.ಕೆ. ಮಂಜಪ್ಪ, ಗೀತಾ ಸಾಂಬ್ರೆಮಠ ಇನ್ನಿತರರು ಇದ್ದರು.

ಭಾವೈಕ್ಯತಾ ಮಹೋತ್ಸವಕ್ಕೆ ಚಾಲನೆ
ಹಾನಗಲ್ಲ: ತಾಲೂಕಿನ ಹೋತನಹಳ್ಳಿ ಗ್ರಾಮದ ಸಿದ್ದಾರೂಢ ಮಠದಲ್ಲಿ 12ನೇ ಭಾವೈಕ್ಯತಾ ಮಹೋತ್ಸವ, ಸಿದ್ದಾರೂಢ ಮಹಾರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಧ್ವಜಾರೋಹಣ ನೆರವೇರಿಸಿದ ಸದ್ಗುರು ಶಂಕರಾನಂದ ಸ್ವಾಮೀಜಿ ಪ್ರಣವ ಮಾತನಾಡಿ, ಕಳೆದ ನೂರಾರು ವರ್ಷಗಳಿಂದ ನಾಡಿನ ಧಾರ್ಮಿಕ ಶ್ರದ್ಧಾಕೇಂದ್ರಗಳಾದ ಮಠಗಳು ಉತ್ತಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿವೆ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮದ ಪ್ರಭಾವ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಸಮುದಾಯ ನಿರ್ಲಕ್ಷ್ಯಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು. ಇದಕ್ಕೂ ಮುನ್ನ ಶ್ರೀಮಠದಲ್ಲಿ ಗುರುಕಲಶ ಸ್ಥಾಪನೆ, ಭಗವದ್ಗೀತಾ ಪಾರಾಯಣ, ಅಖಂಡ ಶಿವಭಜನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಮಹೋತ್ಸವ ಸಮಿತಿ ಹಾಗೂ ಸದ್ಭಕ್ತ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿದ್ದರು.

ಶ್ರದ್ಧಾಭಕ್ತಿಯಿಂದ ನಡೆದ ದಿಂಡಿ ಉತ್ಸವ
ಹಾನಗಲ್ಲ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದವರು ಶ್ರೀ ವಿಠ್ಠಲ ಮಂದಿರದಲ್ಲಿ ಚಾಂಗದೇವ ಮಹಾರಾಜರ ಪುಣ್ಯ ತಿಥಿ ನಿಮಿತ್ತ ದಿಂಡಿ ಉತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಉತ್ಸವದ ಪ್ರಮುಖ ಅಂಗವಾಗಿ ಜ್ಞಾನೇಶ್ವರಿ ಗ್ರಂಥದ ಪಲ್ಲಕ್ಕಿ ಸೇವೆಯೊಂದಿಗೆ ದಿಂಡಿ ನಗರ ಪ್ರದಕ್ಷಿಣೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಭಾವಸಾರ ಕ್ಷತ್ರಿಯ ಸಮಾಜದ ಸದ್ಭಕ್ತರು ಹಾಗೂ ಭಜನಾ ಮಂಡಳಿ ಆಯೋಜಿಸಿದ್ದ 3 ದಿನಗಳ  ಉತ್ಸವದ ಅಂಗವಾಗಿ ಪೋತಿ ಸ್ಥಾಪನೆ ನಡೆಯಿತು. ಕೀರ್ತನಕಾರರಾದ ರಾಘವೇಂದ್ರ ಬಂದಿಷ್ಠಿ, ಜ್ಞಾನೇಶ್ವರ ಫಟಕೆ, ನಾರಾಯಣ ಬೋಡಗೆ ಹಾಗೂ ವಿಠ್ಠಲರಾವ್ ಕೆಟೇನವರ್ ಪ್ರವಚನ ನೀಡಿದರು. ಮಹೇಶ ಕೊಲ್ಲಾಪುರ ಹಾಗೂ ಶ್ರೀಕಾಂತ ತಾಂದಳೆ ಸಾಥ್ ನೀಡಿದರು. ನಂತರ ಸ್ಥಳೀಯ ಸಹನಾ ಕರೋಕೆ ಮೆಲೋಡೀಸ್ ಅವರಿಂದ ಸಂಗೀತ ರಸಮಂಜರಿ ನಡೆಯಿತು. ದಿಂಡಿ ಉತ್ಸವ ಸಮಿತಿ ಅಧ್ಯಕ್ಷ ಮಾರುತಿ ತಾಂದಳೆ ಅಧ್ಯಕ್ಷತೆ ವಹಿಸಿದ್ದರು.

ಕ್ರೀಡೆಯಿಂದ ಮಾನಸಿಕ, ದೈಹಿಕ ಸದೃಢತೆ: ಕುಂದಾಪುರ
ಹಾನಗಲ್ಲ: ಕ್ರೀಡೆ ಮೂಲಕ ಮಕ್ಕಳು ದೈಹಿಕ ಬೆಳವಣಿಗೆ ಜತೆಗೆ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ಜಿಪಂ ಸ್ಥಾಯಿ ಸಮಿತಿ ಸದಸ್ಯ ಪದ್ಮನಾಭ ಕುಂದಾಪುರ ಅಭಿಪ್ರಾಯಪಟ್ಟರು. ಹಾನಗಲ್ಲ ತಾಲೂಕಿನ ಯಳವಟ್ಟಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಹಾವೇರಿ ಜಿಲ್ಲಾ ದಿ ರೈಸಿಂಗ್ ಸ್ಟಾರ್ ಹಾಕಿ ಅಸೋಶಿಯೇಷನ್ ಹಾಗೂ ಜಿಪಂ ಹಾವೇರಿ ಆಶ್ರಯದಲ್ಲಿ ಆರಂಭವಾದ ಮೊರಾರ್ಜಿ ದೇಸಾಯಿ ಹಾಕಿ ಕ್ಲಬ್ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಹಾಕಿ ಅಸೊಸಿಯೇಷನ್ ಉಪಾಧ್ಯಕ್ಷೆ ಸಮಾಜ ಸೇವಕಿ ಮಾಧುರಿ ದೇವಧರ ಮಾತನಾಡಿ, ದೇಸೀ ಕ್ರೀಡೆಗಳನ್ನು ಪ್ರತಿಯೊಬ್ಬರೂ ಪ್ರೀತಿಸಿ, ಗೌರವಿಸಬೇಕೆಂದರು. ಪ್ರಾಚಾರ್ಯ ಓ.ಬಿ. ರಾಘವೇಂದ್ರ, ಡಾ. ಕೆ.ಎಂ. ಬೊಮ್ಮನಹಳ್ಳಿ, ಯಲ್ಲಪ್ಪ ಮಂಡಕ್ಕಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೆಂಕಟೇಶ ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ರಾಜಶೇಖರ ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.

ನೆನಪಿನ ಶಕ್ತಿ ಎಲ್ಲರಲ್ಲೂ ಒಂದೇ ಆಗಿರುವುದಿಲ್ಲ: ಗೊಲ್ಲರ
ಹಾವೇರಿ: ಪ್ರಕೃತಿ ನಮಗೆ ನೀಡಿರುವ ಅನೇಕ ಶಕ್ತಿಗಳಲ್ಲಿ ನೆನಪಿನ ಶಕ್ತಿಯೂ ಒಂದಾಗಿದ್ದು, ಇದು ಎಲ್ಲರಿಗೂ ಒಂದೇ ರೀತಿ ಅಥವಾ ಒಂದೇ ಪ್ರಮಾಣದಲ್ಲಿರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯಾಗುತ್ತದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಗೌಡ ಗೊಲ್ಲರ ಹೇಳಿದರು. ತಾಲೂಕಿನ ಕುರುಬಗೊಂಡ ಗ್ರಾಮದ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾರ್ಗದರ್ಶಿ ಶಿಬಿರದಲ್ಲಿ ಮಾತನಾಡಿದರು. ಮುಖ್ಯಾಧ್ಯಾಪಕ ಎಚ್.ಎಸ್. ಕಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ವೀರೇಶ ಅಂಗಡಿ, ಶಿವರಾಜ ಹೊಳಲ, ಭಾರತಿ ಹಾವೇರಿ ಹಾಗೂ ಪೂಜಾ ವರ್ದಿ ಅನಿಸಿಕೆ ಹಂಚಿಕೊಂಡರು. ಎಸ್.ಡಿ. ಶೋಭಾರಾಣಿ, ಮಾಲತೇಶ ಬಿಲ್ಲಣ್ಣನವರ, ಬಾಪು ತಾಂದಳೆ, ಚನ್ನಬಸಮ್ಮ ಹಿರೇಮಠ ಹಾಗೂ ವಿ.ಎಂ. ಮಲ್ಲಪ್ಪನವರ ಇದ್ದರು. ಗುರುಮಾತೆ ಹೇಮಾವತಿ ಬಸೆಟ್ಟಿಯವರ ಸ್ವಾಗತಿಸಿದರು. ಗುರುಮಾತೆ ಅಕ್ಕಮಹಾದೇವಿ ಮಳಿಮಠ ವಂದಿಸಿದರು.

ಬಂಗಾರು ಲಕ್ಷ್ಮಣ ನಿಧನಕ್ಕೆ ಸಂತಾಪ
ಹಾವೇರಿ: ಬಿಜೆಪಿಯ ರಾಷ್ಟ್ರೀಯ ಮಾಜಿ ಅಧ್ಯಕ್ಷರು ಹಾಗೂ ಕೇಂದ್ರದ ಮಾಜಿ ಸಚಿವ ಬಂಗಾರು ಲಕ್ಷ್ಮಣ ಅವರ ಅಕಾಲಿಕ ನಿಧನದಿಂದ ಪಕ್ಷ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು, ಹಾವೇರಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಉಪಾಧ್ಯಕ್ಷ ವೇದವ್ಯಾಸ ಕಟ್ಟಿ ನೇತೃತ್ವದಲ್ಲಿ ಶನಿವಾರ ಸಂತಾಪ ಸೂಚಕ ಸಭೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ವೇದವ್ಯಾಸ ಕಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರರಾದ ಪ್ರಭು ಹಿಟ್ನಳ್ಳಿ, ಜಿಲ್ಲಾ ಕಾರ್ಯದರ್ಶಿ ರತ್ನಾ ಕಾಶನವರ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮುಳ್ಳೂರ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಕರಬಸಮ್ಮನವರ, ನಗರಸಭೆ ಸದಸ್ಯರಾದ ಕರಬಸಪ್ಪ ಹಳದೂರ, ನಿರಂಜನ ಹೇರೂರ, ಈರಣ್ಣ ಸಂಗೂರ, ಸೋಮೇಶ ಕುರಡೇಕರ, ವೆಂಕಟೇಶ ದೈವಜ್ಞ, ಸಾಗರ ಅಂಗಡಿ, ಭಾಗ್ಯಮ್ಮ ರೆಡ್ಡಿ ಇತರರು ಇದ್ದರು.

ಸಂಘಟನೆಯಿಂದ ಗ್ರಾಮೀಣಅಭಿವೃದ್ಧಿ: ಬೇವಿನಮರದ
ಶಿಗ್ಗಾಂವಿ: ಸಂಘಟನೆಗಳಿಂದ ಗ್ರಾಮಾಭಿವೃದ್ಧಿ ಕಾಣಲು ಸಾಧ್ಯವಿದೆ. ಸಂಘಟನೆಗಳು ಪ್ರಬಲವಾಗಿ ಬೆಳೆಯಬೇಕು ಎಂದು ವಿಪ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು. ತಾಲೂಕಿನ ಬಂಕಾಪುರ ಪಟ್ಟಣದ ಮಾಡರ್ನ್ ಇಂಗ್ಲಿಷ್ ಹೈಸ್ಕೂಲ್ ಆವರಣದಲ್ಲಿ ನಡೆದ ನವಭಾರತಿ ಸಮಗ್ರ ಸಮುದಾಯ ಅಭಿವೃದ್ಧಿ ಸಂಸ್ಥೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯ ಡಾ. ಆರ್.ಎಸ್. ಅರಳೆಲೆಹಿರೇಮಠ, ರಾಣಿಬೆನ್ನೂರಿನ ಡಾ. ಸಂಜೀವ ಮುದ್ರಿ ಮಾತನಾಡಿದರು. ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ದಯಾನಂದ ಕಾಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಡಾ. ವೀರೇಶ, ಡಾ. ಸತ್ಯನಾರಾಯಣ, ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷ ಬಸವರಾಜ ನಾರಾಯಣಪುರ, ನಾಡ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಸಿ. ಪಾಟೀಲ, ನಿವೃತ್ತ ಶಿಕ್ಷಕ ಎ.ಕೆ. ಅದವಾನಿಮಠ, ಮಲ್ಲೇಶಪ್ಪ ಬಡ್ಡಿ, ಸಿದ್ದಲಿಂಗಪ್ಪ ಸಕ್ರಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಬಸವರಾಜ ಗಡಾದ ಇತರರಿದ್ದರು.

ಧರ್ಮ ಕಾರ್ಯಗಳಲ್ಲಿ ಮಠಗಳ ಕಾರ್ಯ ದೊಡ್ಡದು
ಗುತ್ತಲ: ಧರ್ಮ ಕಾರ್ಯಗಳಲ್ಲಿ ಮಠಗಳ ಕಾರ್ಯ ದೊಡ್ಡದಾಗಿದ್ದು, ಆ ನಿಟ್ಟಿನಲ್ಲಿ ಮಠಗಳು ನಿರಂತರ ಕಾರ್ಯೋನ್ಮುಖವಾಗಿವೆ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮಿಜಿ ಹೇಳಿದರು. ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ರುದ್ರಮುನಿ ಶಿವಯೋಗಿಗಳ 134ನೇ ಜಯಂತ್ಯುತ್ಸವ  ಅಂಗವಾಗಿ ನಡೆದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಂಗನಬಸವ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ನಂತರ ಗುರು ರುದ್ರಮುನಿ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ವಿವಿಧ ವಾದ್ಯ, ಮೇಳದೊಂದಿಗೆ ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಶ್ರೀ ಸಂಗನಬಸವ ಕಲ್ಯಾಣ ಮಂಟಪ ತಲುಪಿತು. ಸಿದ್ಧಲಿಂಗ ಸ್ವಾಮೀಜಿ, ಕಂಪ್ಲಿ ಕಲ್ಮಠದ ಅಭಿನವಪ್ರಭು ಸ್ವಾಮೀಜಿ, ಶಿವಕುಮಾರ ಸ್ವಾಮಿಜಿ, ಅಗಡಿ ಅಕ್ಕಿಮಠದ ಗುರುಲಿಂಗ ದೇವರು, ಗುತ್ತಲ ಕಲ್ಮಠದ ಗುರುಸಿದ್ದ ದೇವರು, ಮುತ್ತಣ್ಣ ಯಲಿಗಾರ, ಬಸವರಾಜ ರುದ್ರಾಕ್ಷಿ, ಪಿ.ಎನ್. ನೆಗಳೂರಮಠ, ಫಕ್ಕಿರಯ್ಯ ಕುಲಕರ್ಣಿ ಇತರರಿದ್ದರು.

ಆಮ್ ಆದ್ಮಿ ಪಕ್ಷದಿಂದಜನ ಪರಿಷತ್ ಸಭೆ
ಹಾವೇರಿ: ಕಾಂಗ್ರೆಸ್ 60 ವರ್ಷಗಳ ಕಾಲ ದೇಶವನ್ನು ನಿರಂತರವಾಗಿ ಕೊಳ್ಳೆ ಹೊಡೆದಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿರುವ ಕೇಂದ್ರ ಸರ್ಕಾರದಿಂದ ರೋಸಿ ಹೋಗಿರುವ ಜನತೆ ಬದಲಾವಣೆ ಬಯಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ವಿಜಯ ಶರ್ಮಾ ಹೇಳಿದರು. ನಗರದ ಗಾಂಧಿ ವೃತ್ತದ ಬಳಿ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ಜನ ಪರಿಷತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶ ಹಾಗೂ ರಾಜ್ಯದಲ್ಲಿ ಆಳ್ವಿಕೆ ಮಾಡಿರುವ ಎಲ್ಲ ಪಕ್ಷಗಳಿಂದ ಜನತೆ ಬೇಸತ್ತಿದ್ದಾರೆ ಎಂದರು. ನಂತರ ಪ್ರಮುಖ ನಗರಗಳಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಜಾಗೃತಿ ರ್ಯಾಲಿ ನಡೆಸಲಾಯಿತು. ಜಿಲ್ಲಾ ಸಂಚಾಲಕರಾದ ಶಿವಾನಂದ ಹಳ್ಳೇರ, ಲಿಂಗನಗೌಡ ಅರಳಿಹಳ್ಳಿ, ಶ್ರೀಕಾಂತ ಬರಂತಿಮಠ, ಪಿ.ಎಸ್. ಬಾಸೂರ, ಶಾವುಲ್ ತಲಕೇರಿ, ಅಮರನಾಥ ಬೂತೆ ಇತರರಿದ್ದರು.

ಮಠಗಳಿಗೆ ಅನುದಾನ ಚರ್ಚೆ ವಿಷಯವಾಗದಿರಲಿ: ಶಾಸಕ
ಬ್ಯಾಡಗಿ: ಸರ್ಕಾರದಿಂದ ಮಠಗಳಿಗೆ ಅನುದಾನ ಚರ್ಚೆಯ ವಿಷಯವಾಗಬಾರದು ಬಹುತೇಕ ಮಠಗಳು ಆಯಾ ಕಾಲಘಟ್ಟದಲ್ಲಿ ಭಕ್ತರ ವಂತಿಗೆಯಿಂದಲೇ ಸಮಾಜಮುಖಿ ಕೆಲಸ ಮಾಡಿರುವುದನ್ನು ಇತಿಹಾಸದಿಂದ ತಿಳಿದುಕೊಳ್ಳಬಹುದಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರದ ಮೂಕಪ್ಪಸ್ವಾಮಿಗಳ ದಾಸೋಹ ಮಠದಲ್ಲಿ ರು. 3.60 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಮಠಗಳು ರಾಜಕೀಯ ಮುಕ್ತವಾಗಿರಬೇಕೆಂಬುದು ಕೂಡ ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಮಠಗಳಿಗೆ ಅನುದಾನ ನೀಡುವ ವಿಷಯಕ್ಕೆ ವಿಶೇಷ ಅರ್ಥ ಕಲ್ಪಿಸುವುದಾಗಲಿ ಅಥವಾ ರಾಜಕೀಯ ಲಾಭಕ್ಕಾಗಿ ಸರ್ಕಾರದ ಅನುದಾನ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಧರ್ಮಾಧಿಕಾರಿ ವೇ.ಮೃತ್ಯುಂಜಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯೆ ಗದಿಗೆವ್ವ ಬಸನಗೌಡ್ರ, ಎಪಿಎಂಸಿ ನಿರ್ದೇಶಕ ಎಸ್.ಸಿ. ಶಿಡೇನೂರ, ರಮೇಶ ಸುತ್ತಕೋಟಿ, ಮಾಜಿ ನಿರ್ದೇಶಕ ಹುಚ್ಚನಗೌಡ ಲಿಂಗನಗೌಡ್ರ ಇತರರಿದ್ದರು.

ವ್ಯಕ್ತಿತ್ವಕ್ಕೆ ಗುರು, ಪಾಲಕರ ಮಾರ್ಗದರ್ಶನವಿರಲಿ
ಹಾನಗಲ್ಲ: ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ತರ ಘಟ್ಟವಾಗಿದ್ದು, ತಂದೆ- ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ಭಾವನಾತ್ಮಕವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಉಪನ್ಯಾಸಕಿ ಇಂದ್ರಮ್ಮ ಹಳೇಮನಿ ಹೇಳಿದರು. ತಾಲೂಕಿನ ಆಡೂರು ಗ್ರಾಮದ ಎಸ್ಎಸ್ಜಿವಿ ಬಾಲಕಿಯರ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪಿ.ಎಸ್. ಹಿರೇಮಠ ಮಾತನಾಡಿದರು. ಡಾ. ಎಂ.ಎಸ್. ಕುಲಕರ್ಣಿ ಮಾತನಾಡಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದರು. ಈ ಸಂದರ್ಭ ಕಾರ್ಯದರ್ಶಿ ಡಿ.ಬಿ. ಪಾಟೀಲ, ಎಂ.ಎನ್. ಚನ್ನಗೌಡ, ಎಸ್.ಸಿ. ಕನವಳ್ಳಿ, ಎಸ್.ವಿ. ಕೌಜಗೇರಿ ಇದ್ದರು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿ: ಇಂದು ಸಭೆ
ಹಿರೇಕೆರೂರು: ಪಟ್ಟಣದ ಐತಿಹಾಸಿಕ ಗ್ರಾಮದೇವತೆ ಶ್ರೀ ದುರ್ಗಾದೇವಿ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿ, ಜೀರ್ಣೋದ್ಧಾರಕ್ಕಾಗಿ ಸಮಿತಿ ರಚಿಸುವ ಸಲುವಾಗಿ ಮಾ. 2ರ ಬೆಳಗ್ಗೆ 10ಕ್ಕೆ  ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಕ್ತರ ಸಭೆ ಕರೆಯಲಾಗಿದೆ ಎಂದು ದೇವಸ್ಥಾನ  ಟ್ರಸ್ಟ್ ಅಧ್ಯಕ್ಷ ಜಗದೀಶ ತಂಬಾಕದ ತಿಳಿಸಿದರು. ಸುದ್ದಿಗಾರರಿಗೆ ವಿಷಯ ತಿಳಿಸಿದ ಅವರು, ಈಗಾಗಲೇ ದೇವಸ್ಥಾನ ಟ್ರಸ್ಟಿನ ಸದಸ್ಯರಲ್ಲಿ 5 ಜನ ಸದಸ್ಯರು ನಿಧನರಾಗಿದ್ದಾರೆ. ಈ ಸದಸ್ಯರ ಸ್ಥಾನ ತುಂಬುವ ಸಲುವಾಗಿ ಹೊಸದಾಗಿ ಸದಸ್ಯರ  ನೇಮಕ ಮಾಡುವ ಕುರಿತು ಹಾಗೂ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕುರಿತು ರೂಪುರೇಷೆಗಳನ್ನು ಚರ್ಚಿಸಿ ನಿರ್ಧರಿಸಲಾಗುವುದು. ಭಕ್ತರು ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಚಂದ್ರಪ್ಪ ಮಾರವಳ್ಳಿ, ಶಿವಕುಮಾರ ತಿಪ್ಪಶೆಟ್ಟಿ, ಸುರೇಶ ಮಾಡಿವಾಳರ, ಬಸವರಾಜ ಚಿಂದಿ, ಕೆ. ಜಿ. ಶಿವಯೋಗಿ, ಸುರೇಶ ವೈಶ್ಯರ, ನಾಗರಾಜ ಗುಡ್ಡಳ್ಳಿ, ರಾಮು ಮುರ್ಡೇಶ್ವರ ಇದ್ದರು.

ಬೆಳಗಾವಿ ವಿಭಾಗ ಮಟ್ಟದ ಯುವಜನ ಮೇಳ ಇಂದು
ಹಾವೇರಿ: ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಆಶ್ರಯದಲ್ಲಿ ಬೆಳಗಾವಿ ವಿಭಾಗ ಮಟ್ಟದ ಯುವಜನ ಮೇಳ ಮಾ. 2ರಿಂದ 4ರ ವರೆಗೆ ರಾಣಿಬೆನ್ನೂರು ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. 2ರಂದು ಸಂಜೆ 5-30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಉದ್ಘಾಟಿಸಲಿದ್ದು, ಶಾಸಕ ಕೆ.ಬಿ. ಕೋಳಿವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರಾದ ಶಿವಕುಮಾರ ಉದಾಸಿ, ಪ್ರಹ್ಲಾದ ಜೋಶಿ, ಶಾಸಕರಾದ ರುದ್ರಪ್ಪ ಲಮಾಣಿ, ಮನೋಹರ ತಹಶೀಲ್ದಾರ, ಬಸವರಾಜ ಶಿವಣ್ಣನವರ, ಬಸವರಾಜ ಬೊಮ್ಮಾಯಿ, ಯು.ಬಿ. ಬಣಕಾರ, ವಿಪ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ರಾಣಿಬೆನ್ನೂರ ತಾಪಂ ಅಧ್ಯಕ್ಷೆ ಹೂವಕ್ಕ ನಾಗೂರು, ನಗರಸಭಾಧ್ಯಕ್ಷ ಶಿವಣ್ಣ ಮಣೆಗಾರ, ಎಪಿಎಂಸಿ ಅಧ್ಯಕ್ಷ ನಂದೆಪ್ಪ ತೆಗ್ಗಿನ, ಡಿಸಿ ಮಂಜುನಾಥ ನಾಯ್ಕ, ಎಸ್ಪಿ ಎನ್.ಶಶಿಕುಮಾರ, ಜಿಪಂ ಸಿಇಒ ಕೆ.ಬಿ. ಆಂಜನಪ್ಪ, ಅಶೋಕ ಚವ್ಹಾಣ ಪಾಲ್ಗೊಳ್ಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement