ಶಿಕ್ಷಣ ಸಮಾಜ ಬದಲಿಸುವ ಪ್ರಮುಖ ಅಸ್ತ್ರ
ಹಾವೇರಿ: ಕವಲು ದಾರಿಯಲ್ಲಿರುವ ಸಮಾಜ ಬದಲಾಯಿಸುವ ಏಕೈಕ ಅಸ್ತ್ರವೆಂದರೆ ಶಿಕ್ಷಣ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರವೂ ಪ್ರಮುಖವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಸ್ಥಳೀಯ ದಾನೇಶ್ವರಿ ನಗರದಲ್ಲಿ ನೂತನವಾಗಿ ನಿರ್ಮಿಸಿದ ಪದವಿ ಪೂರ್ವ ಕಾಲೇಜುಗಳ ನೌಕರರ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಮಾಜದ ಅವಿಭಾಜ್ಯ ಅಂಗ. ಎಲ್ಲರೂ ಶಿಕ್ಷಣ ಪಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಉಪನ್ಯಾಸಕರು ಸ್ಪರ್ಧಾತ್ಮಕ ಯುಗದಲ್ಲಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಸುವಂಥ ವಿದ್ಯಾರ್ಥಿಗಳನ್ನು ತಯಾರಿಸಬೇಕು. ಅದಕ್ಕಾಗಿ ಶಿಕ್ಷಕರು ಶ್ರಮಿಸಬೇಕು ಎಂದರು.
ಮಾಜಿ ಶಾಸಕ ನೆಹರೂ ಓಲೇಕಾರ ಮಾತನಾಡಿ, ಕತ್ತಲು ಕವಿದ ವಿದ್ಯಾರ್ಥಿಗಳ ಬಾಳಲ್ಲಿ ಉಪನ್ಯಾಸಕರು ಅಕ್ಷರ ಜ್ಞಾನ ಎಂಬ ಬೆಳಕನ್ನು ಹಚ್ಚಬೇಕು. ಸದಾ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳು ಕೂಡ ಗುರುಗಳ ಬಗ್ಗೆ ಪ್ರೀತಿ, ಗೌರವ, ಅಭಿಮಾನ ಇಟ್ಟುಕೊಂಡು ಅವರ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ಭವಿಷ್ಯದ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಉಪನ್ಯಾಸಕರು ಜವಾಬ್ದಾರಿ ಅರಿತು ನಡೆಯಬೇಕು. ವಿದ್ಯಾರ್ಥಿಗಳ ಮನವೊಲಿಸಿ ಫಲಿತಾಂಶ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪದವಿ ಪೂರ್ವ ಕಾಲೇಜುಗಳ ನೌಕರರ ಭವನವನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಬೇಕು ಎಂದು ಸಲಹೆ ಮಾಡಿದರು.
ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರಾಸ್ತಾವಿಕ ಮಾತನಾಡಿ, ಸಂಸದರು, ಶಾಸಕರ ನಿಧಿಯಿಂದ ತಲಾ ರು. 5 ಲಕ್ಷ, ಎಂಎಲ್‌ಸಿ ನಿಧಿಯಿಂದ ರು. 2 ಲಕ್ಷ, ಪ್ರಾಚಾರ್ಯರ ಸಂಘದಿಂದ ರು. 10 ಲಕ್ಷ ಹಾಗೂ ಬೋಧಕರ ಸಂಘದಿಂದ ರು. 5 ಲಕ್ಷ ವೆಚ್ಚದಲ್ಲಿ ನೌಕರರ ಭವನ ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕ ರುದ್ರಪ್ಪ ಲಾಮಾಣಿ, ಮಾಜಿ ಶಾಸಕ ನೆಹರೂ ಓಲೇಕಾರ, ನಗರಸಭೆ ಸದಸ್ಯ ಐ.ಯು. ಪಠಾಣ ಸೇರಿದಂತೆ ಅನೇಕ ಗಣ್ಯರನ್ನು ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ನಗರಸಭೆ ಸದಸ್ಯ ಸಚಿನ್ ಡಂಬಳ, ಪ್ರಾಚಾರ್ಯ ಡಾ. ಆರ್.ಎಂ. ಕುಬೇರಪ್ಪ, ಪಪೂ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ರವೀಂದ್ರ ರಿತ್ತಿ, ನಿವೃತ್ತ ಜಂಟಿ ನಿರ್ದೇಶಕ ಎ.ಎಚ್. ಮಟ್ಟೂರ, ಧಾರವಾಡ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣೇಶ ಪೂಜಾರ, ಪ್ರಭಾರ ಉಪನಿರ್ದೇಶಕ ಎಚ್.ಎಸ್. ಚಿನ್ನಿಕಟ್ಟಿ, ನೌಕರರ ಸಂಘದ ಕಾರ್ಯಾಧ್ಯಕ್ಷ ಲಿಂಗಯ್ಯ ಹಿರೇಮಠ ಇತರರು ಇದ್ದರು.
ಅಮಿತ್ ಪ್ರಾರ್ಥಿಸಿದರು. ಯಲ್ಲಣ್ಣನವರ ಸ್ವಾಗತಿಸಿದರು. ವೈ.ಬಿ. ಆಲದಕಟ್ಟಿ ಕಾರ್ಯಕ್ರಮ ನಿರೂಪಿಸಿದರು.