ಕವಿವಿ ಪರೀಕ್ಷಾ ಶುಲ್ಕ ಏರಿಕೆಗೆ ಖಂಡನೆ
ಹಾವೇರಿ: ಶುಲ್ಕ ವಿನಾಯಿತಿಗೆ ಆಗ್ರಹಿಸಿ ಮತ್ತು ಕವಿವಿ ಪರೀಕ್ಷಾ ಶುಲ್ಕ ಏರಿಕೆಯನ್ನು ಖಂಡಿಸಿ ಎಸ್‌ಎಫ್‌ಐ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಹಣ ವಾಪಸ್ ಮಾಡದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ಸರ್ಕಾರದ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಘೋಷಣೆಕೂಗಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷೆ ರೇಣುಕಾ ಕಹಾರ ಮಾತನಾಡಿ, ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಗಳ ಜಾರಿಯಿಂದಾಗಿ ವಿದ್ಯಾರ್ಥಿ ಸಮುದಾಯ ಪ್ರತಿನಿತ್ಯ ಬೀದಿಗಿಳಿದು ಪ್ರತಿಭಟನೆ ನಡೆಸುವಂತಾಗಿದೆ. ಈ ಹಿಂದೆ ಒಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೀಗ ತನ್ನ ವರಸೆ ಬದಲಿಸಿ ಶುಲ್ಕ ವಿನಾಯಿತಿಗೆ ಅಂಕಗಳನ್ನು ಮಾನದಂಡವನ್ನಾಗಿ ಪರಿಗಣಿಸಲಾಗುವುದು ಎಂದು ಹೇಳಿ ಈಗ ಮತ್ತೆ ವಿದ್ಯಾರ್ಥಿಗಳಿಗೆ ಮೋಸ ಮಾಡಲು ಹೊರಟಿದೆ. ಸರ್ಕಾರ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಯನ್ನು ಮಾನದಂಡವನ್ನಾಗಿ ಪರಿಗಣಿಸಬೇಕೆ ಹೊರತು ಅಂಕಗಳನ್ನಲ್ಲ. ಅಲ್ಲದೇ ಆನ್‌ಲೈನ್ ಮೂಲಕ ಅರ್ಜಿ ತುಂಬಬೇಕು ಎಂದು ಹೇಳಿರುವುದು ಅವೈಜ್ಞಾನಿಕ ಎಂದು ಆರೋಪಿಸಿದರು.
ಸರ್ಕಾರ ಕೂಡಲೆ ತನ್ನ ನಿರ್ಧಾರ ಬದಲಿಸಿ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಹಣವನ್ನು ವಾಪಸ್ ಮಾಡಬೇಕು. ಜೊತೆಗೆ ಯಾವುದೇ ರೀತಿಯ ಶುಲ್ಕಗಳನ್ನು ಏರಿಸಬಾರದು. ಕರ್ನಾಟಕ ವಿವಿ ವ್ಯಾಪ್ತಿಯಲ್ಲಿನ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕಗಳನ್ನು ಏರಿಸಲು ವಿವಿ ಹೊರಟಿದೆ. ವಿವಿ ಕುಲಪತಿಗಳು ಕೂಡಲೆ ತಮ್ಮ ನಿರ್ಧಾರ ಬದಲಿಸಿ ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಶುಲ್ಕಗಳು ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಎಸ್‌ಎಫ್‌ಐ ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ. ಸುಭಾಸ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ಜಿಲ್ಲಾ ಮುಖಂಡರಾದ ಶಿವರಾಜ ಕಲಕೇರಿ, ಜ್ಯೋತಿ ಶೇಷಗಿರಿ, ಮಂಜುಳಾ ಮಣ್ಣೂರ, ಶೈಲಾ ಅಚ್ಚಗೇರಿ, ಗೀತಾ ಹುಬ್ಬಳ್ಳಿ, ರೂಪಾ ಎಚ್, ಪ್ರಜಾ ಶೇಷಗಿರಿ, ಜಯಶ್ರೀ ಬ್ಯಾಡಗಿ, ವೀರೇಶ ಕುರುಬರ, ರಾಜು ಕುರುಬರ, ಮಹಮ್ಮದ ರಫೀಕ್, ಫಕ್ಕಿರೇಶ ಬಾರ್ಕಿ, ಪ್ರಕಾಶ ವಡ್ಡರ, ಮಧುಕರ ಯಾದವ, ನಿಸಾರಅಹ್ಮದ್ ಮಾಗಡಿ ಇದ್ದರು.