ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸವಣೂರು ಪುರಸಭೆ ದಶಪಿಂಡ ಸಮಾರಾಧನೆ

Mainashree
Updated On : 4 Mar 2014, 10:02 am

ಕನ್ನಡಪ್ರಭ ವಾರ್ತೆ, ಸವಣೂರು, ಮಾ.3
ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ತವರು ಮನೆಯಂತಾಗಿರುವ ಸವಣೂರಿನ ಪುರಸಭೆ ಹಾಗೂ ಅದರ ಹುಚ್ಚಾಟಗಳನ್ನು ಸಹಿಸಿಕೊಂಡು ಅದಕ್ಕೆ ಪರೋಕ್ಷ ಬೆಂಬಲ ನೀಡುತ್ತಿರುವ ಆಡಳಿತದ ವಿರುದ್ಧ ಸೋಮವಾರ ದಶಪಿಂಡ ಸಮಾರಾಧನೆಯನ್ನು ಮಾಡುವ ಮೂಲಕ ಸವಣೂರಿನ ಸಾರ್ವಜನಿಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಮೂಲಕ ತಮ್ಮ ಜನಪರ ಹೋರಾಟಕ್ಕೆ ಹೊಸ ಗತಿ ನೀಡಿದರು.
ಪುರಸಭೆ ದುರಾಡಳಿತದ ವಿರುದ್ಧ ಇದುವರೆಗೆ ನಡೆಸುತ್ತಿದ್ದ ತಮ್ಮ ಎರಡನೇ ಹಂತದ ಅರೆಬೆತ್ತಲೆ ಪ್ರತಿಭಟನೆಗೆ ಸೋಮವಾರದ ದಶಪಿಂಡ ಸಮಾರಾಧನೆಯೊಂದಿಗೆ ಅಲ್ಪವಿರಾಮ ನೀಡಿದ ಹೋರಾಟಗಾರರು, ಧಾರವಾಡದ ಎಸ್.ಆರ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಘೋಷಿಸಿದರು. ಸವಣೂರಿನ ಕಂದಾಯ ಇಲಾಖೆಯ ಆವರಣದಲ್ಲಿ ಕೈಗೊಳ್ಳಲಾದ ಈ ವಿನೂತನ ಪ್ರತಿಭಟನೆಗೆ ಕರವೇ ಸೇರಿದಂತೆ ಹಲವಾರು ಸಂಘಟನೆಗಳ ಪ್ರಮುಖರು ಬೆಂಬಲ ವ್ಯಕ್ತಪಡಿಸಿದರು.
ದಶಪಿಂಡ ಸಮಾರಾಧನೆ
ಸರ್ಕಾರ, ಅಧಿಕಾರಿಗಳು ಹಾಗೂ ಪುರಸಭೆಯ ಹೆಸರಿನಲ್ಲಿ ಪ್ರತ್ಯೇಕವಾದ ಪಿಂಡ ಪ್ರದಾನ ಮಾಡಿ, ತಿಲ ತರ್ಪಣ ನೀಡಿ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿದ ಪ್ರತಿಭಟನಾಕಾರರು, ಕೇಶ ಮುಂಡನ ಸೇರಿದಂತೆ ದಶಪಿಂಡ ಸಮಾರಾಧನೆಯ ಪ್ರತಿಯೊಂದು ವಿಧಿ ವಿಧಾನಗಳನ್ನೂ ವಿಧ್ಯುಕ್ತವಾಗಿ ಕೈಗೊಂಡರು. ಈ ಹಂತದಲ್ಲಿ ಉಪವಿಭಾಗಾಧಿಕಾರಿಗಳಾದ ಶರಣಬಸಪ್ಪ ಕೋಟೆಪ್ಪಗೋಳ ಅವರಿಗೆ ತಮ್ಮ 34ನೇ ಮನವಿಯನ್ನು ಸಲ್ಲಿಸಿದರು.
ಪ್ರಮುಖರಾದ ಮಹಾದೇವ ಮಹೇಂದ್ರಕರ ನೇತೃತ್ವದಲ್ಲಿ ಎರಡು ಹಂತಗಳಲ್ಲಿ ಕೈಗೊಳ್ಳಲಾದ ಈ ಪ್ರತಿಭಟನೆಯ ಅಡಿ 34 ದಿನಗಳ ಕಾಲ ಅರೆಬೆತ್ತಲೆ ಮೆರವಣಿಗೆ, ಪ್ರತಿಕೃತಿ ದಹನ, ಅರಣ್ಯವಾಸಿಗಳ ರೂಪಕಗಳೊಂದಿಗೆ ಸತ್ಯಕ್ಕಾಗಿ ಆಗ್ರಹಿಸಿದ್ದ ಸಾರ್ವಜನಿಕರು, ಅಂತಿಮವಾಗಿ ಪಿಂಡ ಪ್ರದಾನ ಮಾಡುವ ಮೂಲಕ ಜನಪರ ಹೋರಾಟಕ್ಕೆ ಸ್ಪಂದನೆ ತೋರದ ಸರ್ಕಾರದ ಆತ್ಮಕ್ಕೆ ಶಾಂತಿಕೋರಿದರು.
ನಿರ್ಲಜ್ಜತೆಯ ಪರಮಾವಧಿಯನ್ನು ತಲುಪಿರುವ ಸವಣೂರಿನ ಪುರಸಭೆಯಲ್ಲಿ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ದುರುಪಯೋಗ, ನಿಷ್ಕ್ರಿಯತೆ, ಲಂಚಕೋರತನ, ದಬ್ಬಾಳಿಕೆ ಮನೋಭಾವದ ತುಂಬಿಕೊಂಡಿದೆ ಎಂದು ಆರೋಪಿಸಿ ಸಾರ್ವಜನಿಕರು ಹಲವು ಹಂತಗಳಲ್ಲಿ ಪ್ರತಿಭಟನೆ ನಡೆಸಿದ್ದರು. 33 ದಿನಗಳ ಕಾಲ ಕಂದಾಯ ಇಲಾಖಾ ಆವರಣಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಪುರಸಭೆಯ ಎಲ್ಲ ಅವ್ಯವಹಾರಗಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಆಗ್ರಹಿಸಿದರೂ ಅದು ಅರಣ್ಯ ರೋದನವಾಗುತ್ತಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಆರೋಪಿಸಿದ್ದಾರೆ.
ಅಕ್ಷರಶಃ ಅರಾಜಕತೆ ತುಂಬಿಕೊಂಡಿರುವ ಸವಣೂರು ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ. ಅಧಿಕಾರಿಗಳು ನಿರಂಕುಶರಾಗಿದ್ದಾರೆ. ಜನಪ್ರತಿನಿಧಿಗಳು ಅಧಿಕಾರದ ಅಮಲಿನಲ್ಲಿ ಮೈಮರೆತಿದ್ದಾರೆ. ಪುರಸಭೆಯನ್ನು ತಮ್ಮ ಪಿತ್ರಾರ್ಜಿತವಾದ ಆಸ್ತಿ ಎಂದು ತಿಳಿದುಕೊಂಡಿದ್ದಾರೆ. ಸಾರ್ವಜನಿಕರು, ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುವದೇ ತಮ್ಮ ಜನ್ಮಸಿದ್ದವಾದ ಹಕ್ಕು ಎಂದು ತಿಳಿದುಕೊಂಡಿದ್ದಾರೆ. ಇದ್ದೂ ಸತ್ತಂತಾಗಿರುವ, ಕೊಳೆತು ನಾರುತ್ತಿರುವ ಸವಣೂರಿನ ಆಡಳಿತ ವ್ಯವಸ್ಥೆಯ ದಶಪಿಂಡ ಸಮಾರಾಧನೆಯನ್ನು ಕೈಗೊಳ್ಳಲಾಗಿದ್ದು, ಈ ಆಚರಣೆಯ ಮೂಲಕ ಅತೃಪ್ತ ಆತ್ಮಗಳಂತೆ ಅಲೆದಾಡುತ್ತಿರುವ ಹಾಗೂ ಸದ್ಗತಿಯನ್ನೂ ಕಾಣದ ಈ ವ್ಯವಸ್ಥೆಯ ಆತ್ಮಕ್ಕೆ ಶಾಂತಿಯನ್ನು ಕೋರಲಾಗಿದೆ ಎಂದು ಲಿಖಿತ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಹಾದೇವ ಮಹೇಂದ್ರಕರ, ರಮೇಶ ಅಗಸರ, ಮಾರುತಿ ಕೇಶಮುಂಡನದೊಂದಿಗೆ ಪಿಂಡಪ್ರದಾನದ ವಿಧಿ ವಿಧಾನಗಳನ್ನು ಕೈಗೊಂಡರು. ಕರವೇ ಅಧ್ಯಕ್ಷ ಪರಶುರಾಮ್ ಈಳಿಗೇರ ಸೇರಿದಂತೆ ಹಲವಾರು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನಾಗರಾಜ ಬಾಳಿಕಾಯಿ, ಎಂ.ಐ. ರಾಶಿನಕರ್, ಮಂಜು ಕರ್ನೂಲ, ಏಕನಾಥ್, ಉಮೇಶ ಕಳಕಪ್ಪನವರ್, ಬಸವರಾಜ ಕುಂದಗೋಳ, ಈರಯ್ಯ ಹಿರೇಮಠ, ಸಂತೋಷ ಅಚಲಕರ್, ವಿನಾಯಕ ದೇಶಮಾನೆ, ಕೃಷ್ಣಾ ಬಗರೆ, ಬಸನಗೌಡ ಪಾಟೀಲ, ಹುಸೇನಸಾಬ ಡಂಬಳ ಸೇರಿದಂತೆ ಸವಣೂರಿನ ಹಲವಾರು ಸಾರ್ವಜನಿಕರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement