ಅರ್ಹ ಫಲಾನುಭವಿಗೆ ಪಡಿತರ ಚೀಟಿ ದೊರೆಯಲಿ
ಹಾನಗಲ್ಲ: ಆಶ್ರಯ ಮನೆ ಹಾಗೂ ಪಡಿತರ ಚೀಟಿ ಫಲಾನುಭವಿಗಳಿಂದ ಯಾವುದೇ ರೀತಿಯ ಲಂಚ ಪಡೆದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ಅರ್ಹರಲ್ಲದ ಫಲಾನಭವಿಗಳಿಗೆ ಯೋಜನೆಯ ಲಾಭ ನೀಡಿದರೆ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಮನೋಹರ ತಹಶೀಲ್ದಾರ ಎಚ್ಚರಿಸಿದರು.
ಹಾನಗಲ್ಲಿನಲ್ಲಿ ವಿವಿಧ ವಸತಿ ಯೋಜನೆಯ ಕಾಮಗಾರಿ ಆದೇಶ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ, ಪಡಿತರ ಚೀಟಿ ವಿತರಿಸಿ ಮಾತನಾಡಿದರು.
ಪಡಿತರ ಚೀಟಿ ವಿತರಣೆ ಎರಡು ದಿನಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಸಮಾಜದಲ್ಲಿ ಅರ್ಹ ಎಲ್ಲ ವ್ಯಕ್ತಿಗಳಿಗೂ ಇದರ ಲಾಭ ನೀಡಲು ಸರ್ಕಾರ ಬದ್ಧವಾಗಿದೆ. ಆಕಸ್ಮಿಕವಾಗಿ ಇನ್ನೂ ಅರ್ಹ ಫಲಾನುಭವಿಗಳು ಉಳಿದಿದ್ದರೆ ಪರಿಶೀಲಿಸಿ ಪಡಿತರ ಚೀಟಿ ವಿತರಿಸಲಾಗುತ್ತದೆ. ಅನರ್ಹರಿಗೆ ಪಡಿತರ ಚೀಟಿ ನೀಡಿದ್ದರೆ ರದ್ದುಗೊಳಿಸಲಾಗುತ್ತದೆ ಎಂದರು.
ಕಾಂಗ್ರೆಸ್ ಇಚ್ಛಾಶಕ್ತಿ: ಬಡವರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ಒದಗಿಸುವ ಮಹಾತ್ವಾಕಾಂಕ್ಷಿ ಯೋಜನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಸಮರ್ಪಕವಾಗಿ ತಲುಪುತ್ತಿದೆ. ಆಹಾರ ಭದ್ರತಾ ಕಾನೂನಿನಡಿಯಲ್ಲಿ ದೇಶದ ಶೇ. 87 ಜನರಿಗೆ ರು. 3 ಕೆಜಿಯಂತೆ ಆಹಾರಧಾನ್ಯ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಆದರೆ, ರಾಜ್ಯ ಸರ್ಕಾರ ಕೇವಲ ರು. 1ಗೆ ಕೆಜಿಯಂತೆ ಬಡವರಿಗೆ ಇದರ ಲಾಭ ತಲುಪಿಸಲು ಮುಂದಾಗಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಇಚ್ಛಾಶಕ್ತಿಯಿಂದ ಸಾಧ್ಯವಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ತೂಕ ಹಾಗೂ ಬೆಲೆಯಲ್ಲಿ ಮೋಸವಾಗಕೂಡದು. ಇದರ ಮೇಲ್ವಿಚಾರಣೆಗಾಗಿ ಜಾಗೃತಿ ಸಮಿತಿ ಇರುತ್ತದೆ. ಬಡವರಿಗೆ ಮೋಸ ಮಾಡಬೇಡಿ. ನ್ಯಾಯವೊದಗಿಸಿಕೊಡಿ ಎಂದು ಸೂಚಿಸಿದರು.
ದುಷ್ಟ ಶಕ್ತಿಗಳ ನಿಗ್ರಹ: ಹಾನಗಲ್ಲ ತಾಲೂಕಿನಲ್ಲಿ 2013-14ನೇ ಸಾಲಿಗೆ 40 ಗ್ರಾಮ ಪಂಚಾಯಿತಿಗಳಲ್ಲಿ ಬಸವ ವಸತಿ ಯೋಜನೆ ಹಾಗೂ ಇಂದಿರಾ ಆವಾಸ್ ಯೋಜನೆಯಡಿ 1,464 ಮನೆಗಳನ್ನು ನೀಡುವ ಗುರಿ ಹೊಂದಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 1264 ಫಲಾನುಭವಿಗಳು ಸರ್ಕಾರ ಮಂಜೂರು ಮಾಡಿದ ಮನೆಗಳನ್ನು ಕಟ್ಟಿಕೊಳ್ಳಲಿಲ್ಲ. ಇಂಥವರಿಗೆ ಮರು ಅವಕಾಶ ನೀಡಿದಾಗ 500 ಜನ ಮಾತ್ರ ಮನೆ ಕಟ್ಟಿಕೊಳ್ಳಲು ಮುಂದಾದರು. ಈ ವೈಫಲ್ಯಕ್ಕೆ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಕಾರಣವಾಗಿದೆ. ವ್ಯವಸ್ಥಿತ ಸಂಚು ರೂಪಿಸಿ, ಸರ್ಕಾರದ ಯೋಜನೆಗಳನ್ನು ವಿಕೃತಗೊಳಿಸುವ ದುಷ್ಟ ಶಕ್ತಿಗಳ ನಿಗ್ರಹವೇ ನಮ್ಮ ಗುರಿ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಫಲಾನುಭವಿಗಳಿಗೆ ಮನವಿ ಮಾಡಿದರು.
ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರು, ಉಪಾಧ್ಯಕ್ಷೆ ಅನಿತಾ ಶಿವೂರ, ಜಿಪಂ ಸದಸ್ಯರಾದ ಮಹದೇವಪ್ಪ ಭಾಗಸರ, ಕಸ್ತೂರವ್ವ ವಡ್ಡರ, ತಾಪಂ ಸದಸ್ಯರಾದ ಮಧು ಪಾಣಿಗಟ್ಟಿ, ಕಲವೀರಪ್ಪ ಪವಾಡಿ, ಬಸಣ್ಣ ಚೌಡಣ್ಣನವರ, ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ, ಕೆಪಿಸಿಸಿ ಸದಸ್ಯ ಆರ್.ಎಸ್. ಸಾಲಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಮಲ್ಲನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಎಂ. ಪಠಾಣ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಮಹ್ಮದ ಇಕ್ಬಾಲ್ ನದಾಫ, ಪುರಸಭೆ ಸದಸ್ಯ ಸಂತೋಷ ಸುಣಗಾರ, ನೂರ್ ಅಹ್ಮದ ಮೊಕಾಶಿ, ಖುರ್ಶಿದ ಹುಲ್ಲತ್ತಿ, ಗಿರೀಶಗೌಡ ಪಾಟೀಲ, ವೀರೇಶ ಬೈಲವಾಳ, ಜಿ.ಎಂ. ಮುಲ್ಲಾ, ರವಿಕುಮಾರ ಬೆಲ್ಲದ ಮುಂತಾದವರು ಇದ್ದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ. ಲಕ್ಷ್ಮೇಶ್ವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನಿರಂಜನ ಗುಡಿ ನಿರೂಪಿಸಿದರು.