ಕಾಮಗಾರಿಗೆ ಸೂಚನೆ: ಮುಷ್ಕರ ವಾಪಸ್
ಹಾನಗಲ್ಲ: ಕಾಲೇಜು ಕಟ್ಟಡ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಹಾನಗಲ್ಲ ತಾಲೂಕಿನ ತಿಳವಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸ್ಥಳೀಯ ಸಂಘಟನೆಗಳನ್ನೊಳಗೊಂಡು ಆರಂಭಿಸಿದ ಎರಡನೇ ದಿನದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಮನೋಹರ ತಹಶೀಲ್ದಾರ ಭೇಟಿ ನೀಡಿ ಸಮಸ್ಯೆ ಪರಿಹರಿಸಿ ಕೂಡಲೇ ಕಾಮಗಾರಿ ಆರಂಭಿಸಲು ಸೂಚಿಸಿದರು. ಹೀಗಾಗಿ, ಪ್ರತಿಭಟನಾಕಾರರು ಸತ್ಯಾಗ್ರಹ ಕೈಬಿಟ್ಟರು.
ಹಾನಗಲ್ಲ ತಾಲೂಕಿನ ತಿಳವಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಗಿ 2 ವರ್ಷಗಳು ಗತಿಸಿವೆ. ಸರ್ಕಾರದ ಹಿಂದಿನ ಅವಧಿಯಲ್ಲಿಯೇ ತಿಳವಳ್ಳಿ ಹತ್ತಿರದಲ್ಲಿ ಸರ್ಕಾರದ 10 ಎಕರೆ ಜಾಗೆಯನ್ನು ಗುರುತಿಸಿ ಕಾಲೇಜು ಕಟ್ಟಡ ಕಟ್ಟಲು ಅನುದಾನವೂ ಬಿಡುಗಡೆಯಾಗಿದೆ. ಆದರೆ ತಿಳವಳ್ಳಿಯಲ್ಲಿಯೇ ಇನ್ನೊಂದು 3 ಎಕರೆ ಜಾಗೆಯಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾಗಲಿ ಎಂಬ ಅಭಿಪ್ರಾಯ ಮೂಡಿದ್ದರಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಬೇಸತ್ತ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಂಘಟನೆಗಳು ಜನಪ್ರತಿನಿಧಿಗಳಿಗೆ ಕೂಡಲೇ ಈ ಸಮಸ್ಯೆ ಪರಿಹರಿಸುವಂತೆ ಮಾಡಿದ ಮನವಿ ಫಲ ನೀಡಿರಲಿಲ್ಲ. ಹೀಗಾಗಿ ಹೋರಾಟದ ಹಾದಿ ಹಿಡಿದಿದ್ದರು.
ತರಗತಿ ಬಹಿಷ್ಕಾರ: ಸೋಮವಾರ ಆರಂಭವಾದ ಹೋರಾಟ ಸತ್ಯಾಗ್ರಹದ ರೂಪ ಪಡೆಯಿತು. ಇದಕ್ಕೆ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡಿದವು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಒತ್ತಾಯಿಸಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು. ಇದನ್ನು ಅರಿತ ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ ಮಂಗಳವಾರ ಮಧ್ಯಾಹ್ನ ತಿಳವಳ್ಳಿಯ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮಾತುಗಳನ್ನು ಆಲಿಸಿದರು. ಕಟ್ಟಡ ಸ್ಥಳದ ಗೊಂದಲವನ್ನು ಚರ್ಚಿಸಿದರು. ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈಗಾಗಲೇ ಗುರುತಿಸಿದ 10 ಎಕರೆ ಸರ್ಕಾರಿ ಜಾಗೆಯಲ್ಲಿಯೇ ಕಾಲೇಜು ಕಟ್ಟಡ ನಿರ್ಮಾಣವಾಗಲಿ. ಕೇವಲ 3 ಎಕರೆ ಜಮೀನಿನಲ್ಲಾದರೆ ಜಾಗೆಯ ಕೊರತೆ ಆಗುತ್ತದೆ. ಕಟ್ಟಡ ನಿರ್ಮಾಣ ನಡೆದಂತೆ ವಿವಿಧ ವಿಭಾಗಗಳಿಗಾಗಿ ಹಲವು ಕೊಠಡಿ ಹಾಗೂ ಆಟದ ಮೈದಾನದ ಅಗತ್ಯಕ್ಕಾಗಿ ಹೆಚ್ಚು ಜಾಗೆ ಆವಶ್ಯಕ ಎಂಬುದನ್ನು ಶಾಸಕರಿಗೆ ವಿದ್ಯಾರ್ಥಿಗಳು ಮನವರಿಕೆ ಮಾಡಿದರು.
ಸತ್ಯಾಗ್ರಹ ಕೈಬಿಡಲ್ಲ: ಈಗಾಗಲೇ ಕಟ್ಟಡ ಕಾಮಗಾರಿಗಾಗಿ ಸರ್ಕಾರದಿಂದ ರು. 2 ಕೋಟಿ ಅನುದಾನ ಬಿಡುಗಡೆಯಾಗದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆಯೂ ಕೂಡ ಪೂರ್ಣಗೊಂಡಿದೆ. ಅನಗತ್ಯವಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದ್ದರಿಂದ ವಿದ್ಯಾರ್ಥಿಗಳಿಗೆ ಸಕಾಲಿಕವಾಗಿ ಅಭ್ಯಾಸಕ್ಕಾಗಿ ಕಟ್ಟಡ ದೊರೆಯುತ್ತಿಲ್ಲ. ಕಾಲೇಜು ಕಟ್ಟಡ ಕಾಮಗಾರಿ ಆರಂಭಿಸುವವರೆಗೂ ಸತ್ಯಾಗ್ರಹದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಜಿಪಂ ಸದಸ್ಯ ಮಹದೇವಪ್ಪ ಬಾಗಸರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲನಗೌಡ ಪಾಟೀಲ, ನಾಯಕ ಆರ್.ಎಸ್. ಪಾಟೀಲ, ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ಮುಂತಾದವರಿದ್ದರು.
ಈ ಮೊದಲು ನಾ.ಸು. ಹರ್ಡೇಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಥ ಬೀದಿ, ಕರೆಗಲ್ ವೃತ್ತ, ಕೆಳಗಿನ ಸರ್ಕಲ್ ಮೂಲಕ ನಾ.ಸು. ಹರ್ಡೇಕರ್ ವೃತ್ತ ತಲುಪಿ ಬೃಹತ್ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯನ್ನು ಒಂದು ಗಂಟೆಗೂ ಹೆಚ್ಚು ಸಮಯ ಸ್ಥಗಿತಗೊಳಿಸಿ, ಅನಿರ್ದಿಷ್ಟ ಅವಧಿ ವರೆಗೆ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗಿತ್ತು.
ಸ್ವಾಮೀಜಿ ಬೆಂಬಲ: ಗ್ರಾಮದ ಕಲ್ಮಠದ ಬಸವ ನಿರಂಜನ ಸ್ವಾಮೀಜಿ ಸಹ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದರು. ಗ್ರಾಪಂ ಆಡಳಿತ ಮಂಡಳಿ ಸದಸ್ಯರು, ಕದಂಬ ಯುವಕ ಮಂಡಳ, ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಜಯ ಕರ್ನಾಟಕ ಸಂಘಟನೆ, ಮಹಿಳಾ ಸಂಘಗಳು ಸೇರಿದಂತೆ ಹತ್ತಾರು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು.
ವಿದ್ಯಾರ್ಥಿಗಳು ಅಸ್ವಸ್ಥ: ಸತ್ಯಾಗ್ರಹ ನಿರತ ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ರೂಪಾ ಕುರುಬರ, ರಾಘವೇಂದ್ರ ನಿರುಂಬಳಿ ಮತ್ತು ಮೇಘಶ್ವಿನಿ ಸೂಡಂಬಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು. ಇವರಿಗೆ ಸತ್ಯಾಗ್ರಹದ ಸ್ಥಳದಲ್ಲಿಯೇ ಔಷಧೋಪಚಾರ ನೀಡಲಾಗಿತ್ತು. ಗ್ರಾಪಂ ಅಧ್ಯಕ್ಷ ಸಾಧಿಕ್ ಅಹ್ಮದ ಸವಣೂರ, ಉಪಾಧ್ಯಕ್ಷೆ ಕೌಶಲ್ಯಾ ಬಡಿಗೇರ, ಸದಸ್ಯರಾದ ರತ್ನಮ್ಮ ಗುಡ್ಡದಮತ್ತಿಹಳ್ಳಿ, ಪುಟ್ಟರಾಜ ಚಂಚಿ, ಗಾಯಿತ್ರಿ ಕುಬಸದ, ಮಕ್ಬೂಲ್ ಅಹ್ಮದ, ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಆಲದಕಟ್ಟಿ, ನಿತೀನ ಉರಣಕರ, ಗುರುರಾಜ್ ಚಳಮರದ, ಜಗದೀಶ ಪಾಟೀಲ, ಮಂಜು ಪಿ.ಎಂ, ಯಲ್ಲಪ್ಪ ವಿ, ವೀರೇಂದ್ರ ಕರೆಮ್ಮನವರ, ಫಕ್ಕಿರೇಶ ಭಜಂತ್ರಿ, ನಿಂಗಪ್ಪ ಸಪ್ಪೇರ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.