ವಿಜ್ಞಾನಿಗಳ ಆದರ್ಶ ಜೀವನ ಅನುಸರಿಸಿ
ಹಿರೇಕೆರೂರು: ವಿದ್ಯಾರ್ಥಿಗಳು ದೇಶದ ಖ್ಯಾತ ವಿಜ್ಞಾನಿಗಳ ಆದರ್ಶ ಜೀವನ ಅಳವಡಿಸಿಕೊಳ್ಳಬೇಕು. ವಿಜ್ಞಾನದಲ್ಲಿ ಆಸಕ್ತಿ ತೋರಿಸಬೇಕು ಎಂದು ಡಾ. ಗಣೇಶ ಮಾಜಿಗೌಡರ ಹೇಳಿದರು.
ತಾಲೂಕಿನ ಕಡೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಶಿಸ್ತು, ಕ್ರಮಬದ್ದತೆ, ನಿಖರತೆ ಸ್ಪಷ್ಟತೆಯನ್ನು ಪ್ರಯೋಗದ ಮೂಲಕ ಅನುಷ್ಠಾನಗೊಳಿಸುವುದು ವಿಜ್ಞಾನದ ಮುಖ್ಯ ಗುರಿಯಾಗಿದೆ. ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಿದವರು ಸಮಾಜದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. ಇಂದಿನ ದಿನಗಳಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭವಾಂತರಾಗಿದ್ದು, ಅವರಿಗೆ ಕಲಿಯಲು ಸೂಕ್ತ ವ್ಯವಸ್ಥೆಯಿಲ್ಲದ್ದರಿಂದ ಭವಿಷ್ಯದಲ್ಲಿ ಸಾಧನೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.
ಶಾಲೆಯ ಗಣಿತ ಶಿಕ್ಷಕ ಎಂ.ಎಂ. ಕೆರೂರು ಮಾತನಾಡಿ, ವಿಜ್ಞಾನವು ಮನುಷ್ಯರ ಶ್ರೇಯೋಭಿವೃದ್ಧಿಗೆ ತಾಯಿ ಇದ್ದಂತೆ. ವಿವಿಧ ಸಾಧನೆ ಗೈದ ವಿಜ್ಞಾನಿಗಳ ಮಾರ್ಗದಲ್ಲಿ ಅಧ್ಯಯನ ಕೈಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯದ ಕುರಿತು ಪ್ರಬಂದ ಹಾಗೂ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎನ್.ಕೆ. ಪಾಟೀಲ, ಶಿಕ್ಷಕರಾದ ಎಂ.ಕೆ. ಸಿಂಗಾಪುರ, ಎಸ್.ಎಂ.ಪಟ್ಟಣಶೆಟ್ಟಿ, ಎಸ್.ಕೆ. ಗುಳೇದಗುಡ್ಡ, ಬಿ.ಡಿ. ಪಾಟೀಲ, ಎ.ಸಿ. ತುಮ್ಮಿನಕಟ್ಟಿ ಮೊದಲಾದವರು ಇದ್ದರು.