ಶೈಕ್ಷಣಿಕ ಪ್ರಗತಿಗೆ ಬದ್ಧ: ಶಾಸಕ ಶಿವಣ್ಣನವರ
ಬ್ಯಾಡಗಿ: ಜಿಲ್ಲೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಕುರಿತು ಬಜೆಟ್ನಲ್ಲಿ ಘೋಷಿಸಿದ್ದು, ಸರ್ಕಾರ ತೋರುತ್ತಿರುವ ಶೈಕ್ಷಣಿಕ ಬದ್ಧತೆಗೆ ಉದಾಹರಣೆಯಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಶಿಕ್ಷಕರ ವಸತಿಗೃಹ ಸಮುಚ್ಚಯ ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಪ್ರಗತಿಯಿಂದಲೇ ದೇಶದ ಪ್ರಗತಿ ಎಂಬ ಮಾತುಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಲು ಮಹಿಳಾ ವಿದ್ಯಾರ್ಥಿಗಳಿಗೆ ದಿನಕ್ಕೆ ರು. 2 ನೀಡಲಾಗುತ್ತಿದೆಯಲ್ಲದೇ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕ್ಷೀರಭಾಗ್ಯ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಪ್ರಸಕ್ತ ವರ್ಷದ ಆಯವ್ಯಯದಲ್ಲಿ ಸುಮಾರು ರು. 15600 ಕೋಟಿಗಳನ್ನು ಶಿಕ್ಷಣಕ್ಕೆ ಮೀಸಲಿಡಲಾಗಿದ್ದು, ಬಹುಶಃ ಹಿಂದಿನ ಯಾವುದೇ ಸರ್ಕಾರಗಳು ಇಷ್ಟೊಂದು ಬೃಹತ್ ಪ್ರಮಾಣದಷ್ಟು ಅನುದಾನ ಮೀಸಲಿಟ್ಟಿರುವ ಉದಾಹರಣೆಗಳಿಲ್ಲ, ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ತಾಂತ್ರಿಕ ಮಹಾವಿದ್ಯಾಲಯಗಳಿಲ್ಲ. ಈ ಕುರಿತು ಸರ್ಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.
ಶಿಕ್ಷಣವಂತರಿಂದ ಸುಶಿಕ್ಷಿತ ಸಮಾಜದ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ರು. 4 ಕೋಟಿ ವೆಚ್ಚದಲ್ಲಿ ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿಗೆ ಕೂಡು ರಸ್ತೆಗಳ ಅಭಿವೃದ್ಧಿ ಸುವರ್ಣಗ್ರಾಮ ಮತ್ತು ಶಾಸಕರ ಅನುದಾನದಡಿ ರು. 17.40 ಲಕ್ಷ ವೆಚ್ಚದಲ್ಲಿ ಸಿದ್ಧರಾಮೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಗದಿಗೆಮ್ಮ ಬಸನಗೌಡ್ರ, ಎಪಿಎಂಸಿ ಅಧ್ಯಕ್ಷ ಜಗದೀಶ ಕಣಗಲಭಾವಿ, ತಾ.ಪಂ. ಸದಸ್ಯೆರಾದ ಚಮನಬೀ ಮುಲ್ಲಾ, ಗಿರಿಜವ್ವ ಮೆಣಸಿನಹಾಳ, ಎಪಿಎಂಸಿ ನಿರ್ದೇಶಕ ಎಸ್.ಸಿ. ಶಿಡೇನೂರ, ಮಾಜಿ ನಿರ್ದೇಶಕ ಹುಚ್ಚನಗೌಡ ಲಿಂಗನಗೌಡ್ರ, ಗ್ರಾ.ಪಂ. ಅಧ್ಯಕ್ಷೆ ರೇಣವ್ವ ಮೂಡೇರ, ತಾ.ಪಂ. ಮಾಜಿ ಅಧ್ಯಕ್ಷರಾದ ದಾನಪ್ಪ ಚೂರಿ, ಹನುಮಗೌಡ ಪಾಟೀಲ, ಹುಸೇನಸಾಬ್ ದೊಡ್ಮನಿ, ಸುರೇಶಗೌಡ ಪಾಟೀಲ, ರುದ್ರಪ್ಪ ಹೊಂಕಣ, ವೀರಭದ್ರಪ್ಪ ಗೊಡಚಿ, ಶಂಭು ಪಾಟೀಲ, ಟಿಇಓ ಎಸ್.ಆರ್. ಪಾಟೀಲ, ಪ್ರಸನ್ನಕುಮಾರ, ಎಇಇಗಳಾದ ಎಸ್.ಬಿ. ಉಳ್ಳಾಗಡ್ಡಿ, ಎಂ.ಸಿ. ಶಂಕ್ರಿಕೊಪ್ಪ, ಸುರೇಶ ಬೇಡರ, ರಾಜಶೇಖರ ಹರಮಗಟ್ಟಿ, ಹನುಮಂತಪ್ಪ, ಶಾಂತಕುಮಾರ, ಆನಂದ ದೊಡ್ಮನಿ, ವರುಣ ನಾಯ್ಕ ಉಪಸ್ಥಿತರಿದ್ದರು.