ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 6 Mar 2014, 11:01 am

ಚುಸಾಪ: 9ರಂದು ಪದಗ್ರಹಣ ಸಮಾರಂಭ
ಬ್ಯಾಡಗಿ: ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಚಾವಡಿ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ರಂಗಮಂದಿರದಲ್ಲಿ  ಮಾ. 9 ರಂದು ಸಂಜೆ 6.30 ಕ್ಕೆ ನಡೆಯಲಿದೆ.
ಚುಟುಕು ಸಾಹಿತ್ಯ ಪರಿಷತ್ ಹಾಗೂ ಆಂಜನೇಯ ಯುವಕ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಸಾಹಿತಿ ಸತೀಶ ಕುಲಕರ್ಣಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಹಾಗೂ ಚಿತ್ರ ನಟ ಆಕಾಶ ಪಾಲ್ಗೊಳ್ಳುವರು.  ಎಪಿಎಂಸಿ ಮಾಜಿ ಅಧ್ಯಕ್ಷ ಕನ್ನಪ್ಪ ಕೊಪ್ಪದ ಅಧ್ಯಕ್ಷತೆ ವಹಿಸುವರು. ಅಂದು ಶಿಲ್ಪ ಕಲಾವಿದ ಹರೀಶ ಮಾಳಪ್ಪನವರ ಅವರ ಶಿಲ್ಪ ರಚನೆಯ ಪ್ರಾತ್ಯಕ್ಷಿಕೆ, ಕೃಷ್ಣ ಬಡಿಗೇರ ಮತ್ತು ಬಾಬು ಕಲಬುರ್ಗಿ ಅವರ ಸಂಗೀತ ಕಾರ್ಯಕ್ರಮ ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.
ವಿಜ್ಞಾನ ವಿಷಯಕ್ಕೆ ಹೆಚ್ಚು ಒತ್ತು ನೀಡಿ: ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ
ಹಿರೇಕೆರೂರು: ವೈಜ್ಞಾನಿಕ ತಂತ್ರಜ್ಞಾನದಡಿ ಮುಂದುವರಿದ ಇಂದಿನ ದಿನಗಳಲ್ಲಿ ವಿಜ್ಞಾನ ವಿಷಯವನ್ನು ಹೆಚ್ಚಿನ ಆಸಕ್ತಿಯಿಂದ ವಿದ್ಯಾರ್ಥಿಗಳು ಕಲಿಯಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ ಕರೆ ನೀಡಿದರು.  ತಾಲೂಕಿನ ಚಿಕ್ಕೇರೂರು ಗ್ರಾಮದ ಪಿವಿಎಸ್ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ತಾಲೂಕು ವಿಜ್ಞಾನ ವೇದಿಕೆ ಮತ್ತು ಪಿವಿಎಸ್ ಶಾಲೆಯ ವತಿಯಿಂದ ಆಯೋಜಿಸಿದ್ದ ಶಿಕ್ಷಕ-ವಿದ್ಯಾರ್ಥಿ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನವು ನಿಖರತೆಯನ್ನು ಕಲಿಸುತ್ತದೆ. ಕಾರಣ ವಿದ್ಯಾರ್ಥಿಗಳು ವಿಜ್ಞಾನದ ವಿಷಯವನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡುವತ್ತ ಗಮನ ಹರಿಸಿ ವೈಜ್ಞಾನಿಕ ಹಾಗೂ ಸಂಶೋಧನಾ ಮನೋಭಾವನೆ ಬೆಳೆಸಿಕೊಳ್ಳುವಂತೆ ತಿಳಿಸಿದರು. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಯದಿಂದ ಮುಕ್ತರಾಗಿ ಸತತ ಅಭ್ಯಾಸ ಮಾಡುವ ಮೂಲಕ ಉತ್ತಮ ಅಂಕಗಳಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ  ಹೇಳಿದರು. ವಿಜ್ಞಾನ ವೇದಿಕೆ ಅಧ್ಯಕ್ಷ ಎಸ್.ಎನ್. ಬಂಗೇರ, ಕಾರ್ಯದರ್ಶಿ ಕೆ.ಎಂ. ಗುಬ್ಬೇರ, ಜಿ. ಪರಮೇಶಪ್ಪ, ವಿ.ಬಿ. ಹೊಟ್ಟೆಮುದಕಣ್ಣನವರ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement