ಧಾರ್ಮಿಕ ಆಚರಣೆಗಳು ಮೌಢ್ಯವಲ್ಲ
ಬ್ಯಾಡಗಿ: ಧಾರ್ಮಿಕ ಆಚರಣೆಗಳನ್ನು ಸಾಮಾಜಿಕ ಮೌಢ್ಯಗಳೆಂದು ಭಾವಿಸುವುದು ತಪ್ಪು. ದೇವರ ಮೇಲಿನ ನಂಬಿಕೆ ಮನುಷ್ಯನಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲಿದೆ ಎಂದು ಪಂಚಮಠಾಧ್ಯಕ್ಷ ಷ.ಬ್ರ. ಪಶುಪತಿ ಶಿವಾನಂದಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕದಮನಹಳ್ಳಿ ಗ್ರಾಮದ 101 ಪತ್ರಿವನ ಸುಕ್ಷೇತ್ರ ಕದಮನಹಳ್ಳಿ ಗ್ರಾಮದಲ್ಲಿ ಜಗದ್ಗುರು ಪಂಡಿತಾರಾಧ್ಯಸ್ವಾಮಿ ರಥೋತ್ಸವ, ವೀರಭದ್ರೇಶ್ವರ ಗುಗ್ಗುಳ ಹಾಗೂ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಅಂಗವಾಗಿ ಜರುಗಿದ ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಧಾರ್ಮಿಕ ತಳಹದಿ ಮೇಲೆ ಉತ್ತಮ ಚಾರಿತ್ರ್ಯ ಹೊಂದಿರುವ ದೇಶಗಳೂ ಬಹಳಷ್ಟು ಸಮೃದ್ಧಿಯಾಗಿವೆ. ತಾತ್ಕಾಲಿಕ ಸುಖದೆಡೆಗೆ ಮುಖ ಮಾಡಿರುವ ಜನರು ಧಾರ್ಮಿಕ ನಂಬಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು, ಇದರಿಂದ ನೈತಿಕವಾಗಿ ದುರ್ಬಲರಾಗುತ್ತಿದ್ದೇವೆ ಎಂದರು.
ದೇವಾಲಯಗಳು, ಐಕ್ಯ ಮತ್ತು ಸಾಮರಸ್ಯದ ಸಂಕೇತಗಳಾಗಿವೆ. ಧರ್ಮ ಸಂಸ್ಕೃತಿ ಮುಂದುವರಿಸುವಲ್ಲಿ ಅವುಗಳ ಪಾತ್ರ ಮುಖ್ಯವಾಗಿದೆ. ಪ್ರಾರ್ಥನೆ ಸಾಮಾನ್ಯ ಪ್ರಕ್ರಿಯೆಯಾದರೆ ಅದರೆ ಹೆಸರಿನಲ್ಲಿ ಪ್ರಾಣಿ ಬಲಿ, ನರ ಬಲಿ, ಬೆತ್ತಲೆ ಸೇವೆಯಂತಹ ಮೌಢ್ಯಗಳು ಪ್ರಚಲಿತದಲ್ಲಿದ್ದು, ಕಠಿಣ ಕಾನೂನುಗಳ ಮೂಲಕ ಸರ್ಕಾರ ಅವುಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.
ಸಂಪ್ರದಾಯ ಹಾಗೂ ಕಂದಾಚಾರಗಳ ನೆಪದಲ್ಲಿ ಕೆಳವರ್ಗದ ಜನರಿಂದ ಅಂತರ ಕಾಯ್ದುಕೊಂಡಿದ್ದಲ್ಲದೇ ಸಮಾಜದಲ್ಲಿ ಮೇಲು-ಕೀಳೆಂಬ ಸ್ತರಗಳನ್ನೇ ಸೃಷ್ಟಿಸಲಾಗಿದೆ. ಆರ್ಥಿಕವಾಗಿ ಎಷ್ಟೇ ಪ್ರಬಲವಾಗಿದ್ದರೂ ನೆಮ್ಮದಿ ಹಾಗೂ ಸಾರ್ಥಕ ಬದುಕಿಗೆ ಧಾರ್ಮಿಕ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಹಾವೇರಿ ಹರಸೂರು ಬಣ್ಣದಮಠದ ಷ.ಬ್ರ. ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಮಾತನಾಡಿ, ಹಣಕ್ಕಾಗಿ ಆತ್ಮವಂಚನೆ ಮಾಡಿಕೊಳ್ಳುವ ಜನರಿಂದ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ? ಮೋಸ, ವಂಚನೆಗಳ ಕೂಪ ಹೆಚ್ಚಾದ ಹಿನ್ನೆಲೆಯಲ್ಲಿ ಮಾನವೀಯ ಮೌಲ್ಯ, ಧಾರ್ಮಿಕ ನಂಬಿಕೆಗಳು ಸಹಜವಾಗಿ ದೂರಾಗುತ್ತಿವೆ ಎಂದರು.
ಹಿರೇಕುರುವತ್ತಿಯ ಹಿರೇಮಠದ ಷ.ಬ್ರ. ಸಿದ್ಧನಂದೀಶ್ವರ ಶಿವಾಚಾರ್ಯ ಶ್ರೀ ಮಾತನಾಡಿ, ವೈಚಾರಿಕ ಮನೋಭಾವದ ಕೊರತೆಯಿಂದ ಸುಪ್ರಸಿದ್ಧ ದೇವಾಲಯಗಳನ್ನೂ ಸಹ ಜಾತಿ ಹಾಗೂ ಧರ್ಮಗಳಿಗೆ ಮೀಸಲಿಡಲಾಗುತ್ತಿದೆ ಎಂದು ವಿಷಾದಿಸಿದರು. ಇಂತಹ ಸಂಕುಚಿತ ಮನೋಭಾವದಿಂದ ಎಲ್ಲರೂ ಹೊರ ಬರುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಹನುಮನಹಳ್ಳಿ ಹಾಲಸ್ವಾಮಿಗಳಮಠದ ವೇ. ಹಾಲಸಿದ್ಧರಾಮಶ್ರೀಗಳು ಯಲ್ಲನಗೌಡ ಪಾಟೀಲ, ವೀರೇಶ ಅಂಗಡಿ, ಮುರುಗಯ್ಯ ಹಿರೇಮಠ, ನೀಲನಗೌಡ್ರ ಪಾಟೀಲ ಶಿವಯೋಗಯ್ಯ ಹಿರೇಮಠ, ಚನ್ನಬಸನಗೌಡ ಪಾಟೀಲ ಇನ್ನಿತರರಿದ್ದರು.