ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೈತರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಖಂಡನೆ

Mainashree
Updated On : 7 Mar 2014, 10:22 am

ಹಾನಗಲ್ಲ:  ಕಳಪೆ ಹತ್ತಿಬೀಜ ಮಾರಾಟ ಮಾಡಿದ ಮಹಿಕೋ ಕಂಪನಿ ವಿರುದ್ಧ ರಾಣಿಬೆನ್ನೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಬಂಧಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹಾನಗಲ್ಲ ತಾಲೂಕು ಘಟಕಗಳು ಬಲವಾಗಿ ಖಂಡಿಸಿವೆ.
ಈ ಕುರಿತು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಪ್ರತಿಭಟನಾ ಮನವಿ ಅರ್ಪಿಸಿದ ರೈತ ಸಂಘಟನೆಗಳು, ರೈತ ತನಗೆ ಹಾನಿ ಮಾಡಿದ ಬೀಜ ಕಂಪನಿಯ ವಿರುದ್ಧ ಪ್ರತಿಭಟಿಸುವುದು, ನ್ಯಾಯ ಕೇಳುವುದು ರಾಜ್ಯ ಸರ್ಕಾರ ಹಾಗೂ ಪೊಲೀಸರ ದೃಷ್ಟಿಯಲ್ಲಿ ತಪ್ಪಾಗಿ ಕಾಣುತ್ತಿರುವುದು ದುರ್ದೈವದ ಸಂಗತಿ. ಜಿಲ್ಲೆಯಲ್ಲಿ ಈ ಮೊದಲು ಬೆಳೆ ವಿಮಾ ಪರಿಹಾರ ವಿತರಣೆ ಸಂದರ್ಭದಲ್ಲಿಯೂ ಸರ್ಕಾರ ರೈತರ ಸಹಾಯಕ್ಕೆ ಬರಲಿಲ್ಲ. ಈಗ ಕಳಪೆ ಹತ್ತಿಬೀಜ ಮಾರಾಟ ಮಾಡಿದ ಮಹಿಕೋ ಕಂಪನಿಯಿಂದ ರೈತರಿಗಾಗಿರುವ ಅನ್ಯಾಯ ಸರಿಪಡಿಸದೆ, ರಾಣಿಬೆನ್ನೂರಿನ ಕಂಪನಿ ಎದುರು ಪ್ರತಿಭಟಿಸಿದ ರೈತರನ್ನು ಬಂಧಿಸಿರುವುದು ರೈತ ವಿರೋಧಿ ಧೋರಣೆಯಾಗಿದೆ. ರೈತ ಸಂಘಟನೆಗಳು ಈ ದೌರ್ಜನ್ಯವನ್ನು ವಿರೋಧಿಸುತ್ತವೆ. ಮಹಿಕೋ ಕಂಪನಿಯ ಕಳಪೆ ಬೀಜದಿಂದಾಗಿ 8280 ಹೆಕ್ಟೇರ್ ಪ್ರದೇಶದ ಹತ್ತಿಬೆಳೆ ಹಾನಿಗೊಳಗಾಗಿದೆ. ಇದು ವರೆಗೂ ಈ ಕಂಪನಿ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಈ ಹಿಂದೆ ನೀಡಿರುವ ಭರವಸೆಯಂತೆ ಕೂಡಲೇ ಮಧ್ಯ ಪ್ರವೇಶಿಸಿ ಕಂಪನಿಯಿಂದ ಪರಿಹಾರ ಕೊಡಿಸಬೇಕು. ಈ ಕಂಪನಿಯ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡದಂತೆ ತಡೆಹಿಡಿಯಬೇಕು. ಅಲ್ಲದೇ ಇಂದು ಬಂಧಿಸಿರುವ ರೈತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ರೈತರಿಗಾದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಮಾಲಿಂಗಪ್ಪ ಅಕ್ಕಿವಳ್ಳಿ, ಸಂಘಟನಾ ಕಾರ್ಯದರ್ಶಿ ಅಡಿವೆಪ್ಪ ಆಲದಕಟ್ಟಿ, ರೈತ ಮುಖಂಡರಾದ ಫಕ್ಕೀರಪ್ಪ ಚೌಟಿ, ಮರ್ದಾನಸಾಬ ಬಡಗಿ, ವಾಸು ಕಮಾಟಿ, ಚನ್ನಬಸಪ್ಪ ಅಕ್ಕಿವಳ್ಳಿ, ನಾಗೇಂದ್ರ ಬಮ್ಮನಹಳ್ಳಿ, ವಿರೂಪಾಕ್ಷಪ್ಪ ಕಡಬಗೇರಿ, ಮಂಜಪ್ಪ ಸುರಳೇಶ್ವರ, ಕುಮಾರ ನೀರಲಗಿ, ರುದ್ರಪ್ಪ ಯಲ್ಲಾಪುರ, ರಾಜಪ್ಪ ತೊರವಂದ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement