ಶಿಕ್ಷಣ ಕ್ಷೇತ್ರದಿಂದ ವಿಕೃತರ ಶುದ್ಧೀಕರಣ ಕೆಲಸವಾಗಲಿ
ಶಿಗ್ಗಾಂವಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಇಂದು ಅವಶ್ಯವಾಗಿದ್ದು, ಅದು ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ. ವಿಕೃತ ಮನಸ್ಸನ್ನು ಸುಸಂಸ್ಕೃತಗೊಳಿಸುವ ಕೆಲಸ ಶಿಕ್ಷಣ ಕ್ಷೇತ್ರದಿಂದಾಗಬೇಕಿದೆ ಎಂದು ಸವಣೂರಿನ ಮೊರಾರ್ಜಿ ವಸತಿ ಪ್ರೌಢಶಾಲೆಯ ಶಿಕ್ಷಕ ರವಿಕಿರಣ ನಾಯಕ ಹೇಳಿದರು.
ತಾಲೂಕಿನ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದಿ. ವೀರಪ್ಪ ಬಸಪ್ಪ ಮತ್ತಿಗಟ್ಟಿ ಇವರ ಸ್ಮರಣಾರ್ಥ ಚನ್ನಬಸಪ್ಪ ಮತ್ತಿಗಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಭಾವೈಕ್ಯತೆ ವಿಷಯವಾಗಿ ಉಪನ್ಯಾಸ ನೀಡಿದರು.
ಮನುಷ್ಯನಲ್ಲಿಯ ಗುಂಪುಗಾರಿಕೆ, ಭಾವೈಕ್ಯತೆಗೆ ಅಡ್ಡಿಯಾಗಿದೆ. ರಾಜಕೀಯ ಧಾರ್ಮಿಕತೆಯಲ್ಲಿ ಗುಂಪುಗಾರಿಕೆಯನ್ನು ದಾಳವಾಗಿ ಉಪಯೋಗಿಸುತ್ತಿದೆ. ಆದರೆ ರಾಜಕೀಯಕ್ಕೆ ಸಮಯದ ನಿಗದಿ ಇದೆ, ಆದರೆ ಧಾರ್ಮಿಕ ಗುಂಪುಗಾರಿಕೆ ಶಾಶ್ವತವಾಗಿ ಉಳಿಯುತ್ತದೆ. ಇದು ನಮಗೊಂದು ದೊಡ್ಡ ಪಿಡುಗು ಎಂದು ವಿಷಾದ ವ್ಯಕ್ತಪಡಿಸಿದ ಅವರು, ಬುದ್ಧ, ಬಸವಾದಿ ಶರಣರಾಗಲು ಯಾವುದೆ ಪದವಿ ಇರಲಿಲ್ಲ. ಅವರ ತತ್ವಗಳನ್ನು ತಿಳಿದುಕೊಂಡರೆ ನಾವು ಜೀವನವನ್ನು ಆನಂದಮಯವಾಗಿ ಸಾಗಿಸಬಹುದು ಎಂದರು.
ದತ್ತಿ ದಾನಿಗಳಾದ ಚನ್ನಬಸಪ್ಪ ಮತ್ತಿಗಟ್ಟಿ ಮಾತನಾಡಿ, ಕೆಲವು ದಶಕಗಳ ಹಿಂದೆ ಶಿಕ್ಷಕರು ಗ್ರಾಮಗಳಲ್ಲಿ ಅತಿ ಕಡಿಮೆ ವೇತನದಲ್ಲಿ ಮನೆಯಿಂದ ಊಟ ತಂದು ಶಾಲೆಗಳಲ್ಲಿ ವಸತಿ ಮಾಡಿ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದ್ದರು. ಈಗ ಶಿಕ್ಷಕರಿಗೆ ಎಲ್ಲ ಅನುಕೂಲತೆಗಳಿವೆ. ಮಕ್ಕಳು ಶಿಕ್ಷಕರನ್ನು ಗೌರವಿಸಿ ಅವರಿಂದ ಉತ್ತಮ ಶಿಕ್ಷಣ ಪಡೆದು ಶಾಲೆ ಮತ್ತು ಗ್ರಾಮಕ್ಕೆ ಕೀರ್ತಿತರಬೇಕೆಂದರು.
ಅಧ್ಯಕ್ಷೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಬಸರಿಕಟ್ಟಿ ವಹಿಸಿದ್ದರು. ಉದ್ಘಾಟನೆಯನ್ನು ನೀರಲಗಿ ಗ್ರಾಮದ ಗಣ್ಯರಾದ ಸಿದ್ದನಗೌಡ. ಜಿ. ಪಾಟೀಲ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಮಲ್ಲಪ್ಪ ರಾಮಗೇರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸಿ.ಎಸ್. ಚಿಕ್ಕಮಠ, ಮುಖ್ಯ ಶಿಕ್ಷಕ ಎನ್.ಎ. ತಾಳಿಕೋಟಿ, ಶಿಕ್ಷಕ ಹೊನ್ನಪ್ಪನವರ, ರಾಮಣ್ಣ ದರಣೆಪ್ಪನವರ, ಗ್ರಾಪಂ ಸದಸ್ಯ ಜಿ.ಜಿ. ದೊಡ್ಡಗೌಡ್ರ, ಮಹದೇವಪ್ಪ ಹಳ್ಯಾಳ, ನೀಲಕಂಠಪ್ಪ ಬಡ್ನಿ, ಸಿ.ಎಸ್. ಕೋಣನವರ ಉಪಸ್ಥಿತರಿದ್ದರು.