13ಕ್ಕೆ ಬೇಡಿಕೆ ಈಡೇರಿಕೆಗೆ ಅರ್ಚಕರಿಂದ ಮನವಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 7
ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಮಾ. 13ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಮೂಲಕ ಹಾವೇರಿ ಜಿಲ್ಲಾಧಿಕಾರಿ ಮಂಜುನಾಥ ನಾಯ್ಕಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘ ತಿಳಿಸಿದೆ.
ಜಿಲ್ಲೆಯ ದೇವಸ್ಥಾನಗಳ ಪೂಜಾ ಅರ್ಚಕರ ವಿವಿಧ ಬೇಡಿಕೆಗಳಾದ ಇಲಾಖೆ ವತಿಯಿಂದ ಗುರುತಿನ ಚೀಟಿ ನೀಡುವುದು, ಸರ್ಕಾರಿ ವೇತನ ವಸತಿ ಸೌಲಭ್ಯ ಕಲ್ಪಿಸುವುದು, ಖಾಸಗಿ ದೇವಸ್ಥಾನಗಳ ಅರ್ಚಕರಿಗೆ ಮಾಸಾಶನ ಕೊಡುವುದು, ವರ್ಷಾಸನ ರು. 24,000 ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾ. 13ರಂದು ಬೆಳಗ್ಗೆ 11 ಗಂಟೆಗೆ ನಗರದ ಮುರಘರಾಜೇಂದ್ರಸ್ವಾಮಿ ಮಠದಲ್ಲಿ ಪ್ರತಿಭಟಿಸುವ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಅರ್ಚಕರ ಸಂಘದ ಅಧ್ಯಕ್ಷ ರುದ್ರಯ್ಯ ಸಾಲಿಮಠ, ಉಪಾಧ್ಯಕ್ಷ ಪಂಜಪ್ಪ ಪೂಜಾರ, ಕಾರ್ಯದರ್ಶಿ ಮಲ್ಲೇಶಪ್ಪ ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಚಿತ ಸೈಕಲ್ ವಿತರಣೆ
ರಾಣಿಬೆನ್ನೂರು: ನಗರದ ನಂ. 8ನೇ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ಸೈಕಲ್ ವಿತರಣೆಯನ್ನು ಎಸ್ಡಿಎಂಸಿ ಅಧ್ಯಕ್ಷ ಬೀರಪ್ಪ ಬೆನ್ನೂರು ನೆರವೇರಿಸಿದರು. ಜಿ.ಎಸ್. ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಚ್. ಮೇಟಿ, ಶಿಕ್ಷಣ ಸಂಯೋಜಕ ಎಫ್.ಎಚ್. ಚಮಟಿ, ಎಸ್ಡಿಎಂಸಿ ಸದಸ್ಯರಾದ ಸುಧಾ ಕೊಪ್ಪದ, ಉಜ್ಜಪ್ಪ ಮಜ್ಜಗಿ, ಅಶೋಕ ಕುಂಚಾವಟಿ, ಶಿಕ್ಷಕ ಎನ್.ಎಸ್. ಶಿರಗೇರಿ, ಬಿ.ಕೆ. ವಡೇರಹಳ್ಳಿ, ಇಂದಿರಾ ಸಾವಂತಲವರ, ಕೆ.ಎಂ. ಬಸವರಡ್ಡಿ ಇದ್ದರು.
ಅಭಿವೃದ್ಧಿ ಕಾಮಗಾರಿಗೆ ಕೋಳಿವಾಡ ಭೂಮಿಪೂಜೆ
ರಾಣಿಬೆನ್ನೂರು: ತುಂಗಾಮೇಲ್ದಂಡೆ ಯೋಜನೆಯ ರಾಣಿಬೆನ್ನೂರು ಉಪ ವಿಭಾಗ ನಂ 1 ಹಾಗೂ ನಂ 2 ಮತ್ತು ಲೋಕೋಪಯೋಗಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಈಚೆಗೆ ಏರ್ಪಡಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಬಿ. ಕೋಳಿವಾಡ ಗುದ್ದಲಿಪೂಜೆ ನೆರವೇರಿಸಿದರು. ಉತ್ತಮ ರಸ್ತೆಗಳ ನಿರ್ಮಾಣದಿಂದ ಗ್ರಾಮೀಣ ಪ್ರದೇಶದ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಮಾರುಕಟ್ಟೆಗೆ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾಜ ಮಂಜುಳಾ ಅಂಬಲಿ, ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ಸಿದ್ದಣ್ಣ ಅಂಬಲಿ, ಬೆಲೋರು ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ ಚಳಗೇರಿ, ಕರಿಯಪ್ಪ ಹುಚ್ಚಳ್ಳೇರ, ತಿಮ್ಮನಗೌಡ ಪಾಟೀಲ, ಹನುಮಂತಪ್ಪ ಚೌಟಗಿ, ಹನುಮಂತಪ್ಪ ಗುಂಡಗಟ್ಟಿ, ಹಾಲೇಶ ಗಿರಿಯಪ್ಪನವರ, ನಾಗರಾಜ ಬೆನ್ನೂರು, ಗ್ರಾಪಂ ಮಾಜಿ ಅಧ್ಯಕ್ಷ ಕರಿಯಪ್ಪ ಹುಬ್ಬಳ್ಳಿ, ಚಂದ್ರಪ್ಪ ಐರಣಿ, ಕರಿಯಪ್ಪ ಹುಚ್ಚಳ್ಳೆರ ಇದ್ದರು.
ದ್ವಿಚಕ್ರ ವಾಹನ ಡಿಕ್ಕಿ: ಓರ್ವ ಸಾವು
ಶಿಗ್ಗಾಂವಿ: ದ್ವಿಚಕ್ರ ವಾಹನ ಮುಖಾ ಮುಖಿ ಡಿಕ್ಕಿಯಿಂದಾಗಿ ಓರ್ವಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲೂಕಿನ ವನಹಳ್ಳಿ ಕ್ರಾಸ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ರಾತ್ರಿ 8 ಗಂಟೆಗೆ ಜರುಗಿದೆ. ಚಂದ್ರಪ್ಪ ವೀರಭದ್ರಪ್ಪ ರಾಟಿ (50) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದಹನುಮಂತಪ್ಪ ವಡ್ಡರ ಎಂದು ತಿಳಿದು ಬಂದಿದ್ದು, ತೀವ್ರ ತರಹದ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇನ್ನಿಬ್ಬರು ಗಾಯಾಳುಗಳನ್ನು ಉಗ್ಗಪ್ಪ ವಡ್ಡರ, ಪರಸಪ್ಪ ಹೋಂಬಳ ಕೂಡಾ ಗಾಯಗೊಂಡಿದ್ದು, ಇವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಎಲ್ಲರೂ ತಾಲೂಕಿನ ವನಹಳ್ಳಿ ಗ್ರಾಮದವರೆನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.