ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಲ್ಪಸಂಖ್ಯಾತ ಕಾಲೇಜುಗಳ ವಿರುದ್ಧ ಪ್ರತಿಭಟನೆ

Rashmi Kasaragodu
Updated On : 8 Mar 2014, 12:26 pm

ಹಾವೇರಿ: ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳು ನಿಯಮ ಗಾಳಿಗೆ ತೂರಿ ಸೀಟು ಮಾರಿಕೊಂಡಿದ್ದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಸಿ.ಬಿ. ಕೊಳ್ಳಿ ಕಾಲೇಜಿನ ಮುಂದೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ,ಸ್ಥಳೀಯವಾಗಿ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ನಿರ್ದಿಷ್ಟ ಸೀಟುಗಳನ್ನು ಮೀಸಲಿರಿಸಲಾಗಿದೆ. ಈ ಮೀಸಲಾಗಿರುವ ಸೀಟುಗಳನ್ನು ಯಾವುದೇ ಕಾರಣದಿಂದಲೂ ಇತರೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವಂತಿಲ್ಲ. ಆದರೆ ಸರ್ಕಾರಿ ಮತ್ತು ಖಾಸಗಿ ಸೀಟು ಹಂಚಿಕೆ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಸೀಟುಗಳನ್ನು ಪಡೆದಿರುವ ಬಹುತೇಕ ಎಲ್ಲಾ ಭಾಷಾ-ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳು ಸೀಟುಗಳನ್ನು ಅಕ್ರಮವಾಗಿ ಮಾರಿಕೊಂಡಿರುವುದು ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಮೋಸ ಮಾಡಿದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿರುವ ಅಧಿಕಾರಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿರುವ ಸರ್ಕಾರದ ನಿಲುವನ್ನು ಸಂಘಟನೆ ವಿರೋಧಿಸುತ್ತದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿಯದೆ, ಈ ಕೂಡಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರನ್ನು ಕಡ್ಡಾಯ ರಜೆಯಿಂದ ವಾಪಸ್ ಕರೆಸಿಕೊಳ್ಳಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ, ಉನ್ನತ ಮಟ್ಟದ ತನಿಖೆಗೆ ಕೂಡಲೇ ಆದೇಶಿಸಬೇಕು. ಈ ಹಗರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಸೀಟು ಹಗರಣದಲ್ಲಿ ಭಾಗಿಯಾಗಿ, ವಿದ್ಯಾರ್ಥಿಗಳಿಗೆ ವಂಚಿಸಿರುವ ಕಾಲೇಜುಗಳ ಸ್ಥಾನಮಾನವನ್ನು ರದ್ದುಪಡಿಸಬೇಕು. ಅಲ್ಪಸಂಖ್ಯಾತ ಕಾಲೇಜುಗಳ ಮೀಸಲು ಸೀಟುಗಳನ್ನು ಸರ್ಕಾರವೆ ಸಿಇಟಿ ಮೂಲಕ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಸಂಚಾಲಕ ನಾಗರಾಜ ಹುರಳಿಕುಪ್ಪಿ, ದೊಡ್ಡಣ್ಣ, ವಿನಯಕುಮಾರ, ಅಕ್ಷಯ, ಮನೋಜ ಯಾದವ, ದೀಪಕ್ ಹೆಬ್ಬಾರೆ, ಪುಟ್ಟರಾಜ ಮುಗುಳಿ, ಫಕ್ಕೀರಗೌಡ ಭರಮಗೌಡ್ರ, ನಾಗರಾಜ ದೇಶಮಾನ್ಯ, ರಾಘವೇಂದ್ರ ನರಗುಂದ, ರಾಕೇಶ, ಮನುಕುಮಾರ, ಭರತ್ ಎಸ್., ಮರೇಶ ಶಿರಸಂಗಿ, ನಾಗರಾಜ, ಸಿದ್ದೇಶ್ವರ ಪಠಾಡೆ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement