ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಗರಸಭೆ ಮಳಿಗೆಗೆ ನೂರೇ ರು. ಬಾಡಿಗೆ

Lingaraj Badiger
Updated On : 9 Mar 2014, 11:17 am

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 8
ಹಾವೇರಿ ಜಿಲ್ಲೆಯಾದ ನಂತರ ಕಟ್ಟಡ, ನಿವೇಶನ, ಮನೆಗಳ ಬಾಡಿಗೆ ದರ ಗಗನಮುಖಿಯಾಗಿದೆ. ಆದರೆ, ನಗರಸಭೆಯ ಸುಮಾರು 250ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳ ಬೆಲೆ ಮಾತ್ರ ನೂರರ ಲೆಕ್ಕದಲ್ಲಿ ಸಿಗುತ್ತಿದೆ. ಇದು ಆಶ್ಚರ್ಯವಾದರೂ ಸತ್ಯ. ಅಷ್ಟೇ ಅಲ್ಲ, ಇದು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಸಾಕ್ಷಿಯಾಗಿದೆ.
ಹಾವೇರಿ ನಗರಸಭೆಗೆ ಸಾಕಷ್ಟು ಆಸ್ತಿಯಿದ್ದರೂ ಖಜಾನೆ ಮಾತ್ರ ಬರಿದಾಗಿದೆ. ಇದಕ್ಕೆ ಕಾರಣ ನಗರಸಭೆಯಲ್ಲಿ ಈ ಹಿಂದೆ ಇದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತಿದೆ. ನಗರಸಭೆ ಆಸ್ತಿಯಾಗಿರುವ 252 ವಾಣಿಜ್ಯ ಮಳಿಗೆಗಳು 2002ರಿಂದಲೂ ಮರು ಹರಾಜಾಗದ್ದರಿಂದ 12 ವರ್ಷದ ಹಿಂದಿನ ಬೆಲೆಯೇ ಈಗಲೂ ಚಾಲ್ತಿಯಲ್ಲಿದೆ. ಮಾಸಿಕ ಹತ್ತಾರು ಲಕ್ಷ ರು. ಆದಾಯ ತರಬೇಕಿದ್ದ ಈ ವಾಣಿಜ್ಯ ಮಳಿಗೆಗಳು ಈಗ ಲೆಕ್ಕಕ್ಕಿಲ್ಲದಂತಾಗಿವೆ. ಕೆಲ ಮಳಿಗೆಗಳನ್ನು ನಿಯಮ ಉಲ್ಲಂಘಿಸಿ ಮೂಲ ಪರವಾನಗಿದಾರರು ಬೇರೆಯವರಿಗೆ ಹಸ್ತಾಂತರಿಸುವ ಉದಾಹರಣೆಯೂ ಇದೆ. ಇದರಿಂದ ನಗರಸಭೆಯ ವಾರ್ಷಿಕ ಕೋಟ್ಯಂತರ ರು. ಆದಾಯಕ್ಕೆ ಕೊಕ್ಕೆ ಬಿದ್ದಿದೆ.
ನೂರರ ಲೆಕ್ಕದಲ್ಲಿ ಮಳಿಗೆ: ಲಾಲಬಹದ್ದೂರು ಶಾಸ್ತ್ರಿ ಮಾರುಕಟ್ಟೆಯಲ್ಲಿನ 10 ಮಳಿಗೆಗಳನ್ನು 2002ರಲ್ಲಿ ಕೇವಲ ರು. 3 ಸಾವಿರ ಠೇವಣಿ ಇಟ್ಟುಕೊಂಡು ರು. 179 ರಿಂದ 182ರ ವರೆಗೆ ನಿಗದಿಪಡಿಸಿ ನೀಡಲಾಗಿದೆ. ನಂತರ ಬಾಡಿಗೆ ಅವಧಿಯನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದ್ದು, ಠೇವಣಿಯನ್ನೂ ತುಂಬಿಸಿಕೊಂಡಿಲ್ಲ. ಸುಲಭ ಶೌಚಾಲಯದ ಬಳಿಯ 4 ಮಳಿಗೆಗಳನ್ನು 2006 ಮತ್ತೆ 2009ರಿಂದ ಮುಂದುವರಿಸಿದ್ದು, ರು. 10 ಸಾವಿರ ಠೇವಣಿಯನ್ನೂ ಭರ್ತಿ ಮಾಡಿಸಿಕೊಂಡಿಲ್ಲ. ತರಕಾರಿ ಮಾರುಕಟ್ಟೆ ಬಳಿಯ 36 ಮಳಿಗೆಗಳನ್ನು 2002ರಲ್ಲಿ ಹರಾಜು ಮಾಡಿದ್ದು, ಸರಾಸರಿ ರು. 300 ಗಳಿಂದ ರು. 950 ವರೆಗೆ ನೀಡಲಾಗಿದೆ. ಪ್ರಸ್ತುತ ಈ ಮಳಿಗೆಗಳ ಬೆಲೆ ಐದಾರು ಪಟ್ಟು ಹೆಚ್ಚಾಗಿದೆ.
ಬಾಡಿಗೆ ವಸೂಲಿಯೂ ಇಲ್ಲ: ಮೀನು ಮಾರುಕಟ್ಟೆಯಲ್ಲಿನ 10 ಮಳಿಗೆಗಳು ಹಾಗೂ ದನದ ಮಾಂಸ ಮಾರಾಟದ 16 ಮಳಿಗೆಗಳ ಬಾಡಿಗೆಯನ್ನೇ ವಸೂಲಿ ಮಾಡಿಲ್ಲ. ಮಟನ್ ಮಾರ್ಕೆಟ್‌ನ 18 ಮಳಿಗೆ, ಹೈಸ್ಕೂಲ್ ರಸ್ತೆಯ 4 ಮಳಿಗೆ ಸೇರಿದಂತೆ ಅನೇಕ ಅಂಗಡಿಗಳನ್ನು ಇದುವರೆಗೆ ಹರಾಜು ಹಾಕಿಲ್ಲ.
ತರಕಾರಿ ಮಾರುಕಟ್ಟೆಯಲ್ಲಿನ ಅನೇಕ ಮಳಿಗೆಗಳ ಬಾಡಿಗೆದಾರರ ಮೂಲ ಹೆಸರೇ ಬದಲಾವಣೆಯಾಗಿದ್ದು, ಅವಧಿ ಮುಗಿದರೂ ಲೀಲಾವು ಹಾಕದೇ ನಗರಸಭೆ ಅಧಿಕಾರಿಗಳು ಬೇಜವಾಬ್ದಾರಿತನ ತೋರಿದ್ದು, ದಾಖಲೆಗಳಿಂದ ಕಂಡುಬರುತ್ತದೆ. ಇನ್ನು ಕೆಲವು ಮಳಿಗೆಗಳಿಂದ ಬಾಡಿಗೆ ಹಣವನ್ನು ಕಾನೂನು ಬಾಹಿರ ರೀತಿಯಲ್ಲಿ ವಸೂಲಿ ಮಾಡಲಾಗಿದೆ. ಅಲ್ಲದೇ ಬಾಡಿಗೆದಾರರೊಂದಿಗೆ ಒಡಂಬಡಿಕೆಯನ್ನೂ ಮಾಡಿಕೊಳ್ಳದೇ ಕಾನೂನು ಉಲ್ಲಂಘನೆ ಮಾಡಲಾಗಿದೆ.
ಆದಾಯಕ್ಕೆ ಕತ್ತರಿ: ಹೀಗೆ ನಗರಸಭೆಗೆ ಸೇರಿದ ಸುಮಾರು 250 ಮಳಿಗೆಗಳ ಪೈಕಿ ಹೆಚ್ಚಿನವು 10 ವರ್ಷಗಳಿಂದ ಮರು ಹಾರಾಜಾಗದೇ ಕನಿಷ್ಠ ಬಾಡಿಗೆಗೆ ನೀಡಲಾಗಿದೆ. ಇದರಿಂದ ನಗರಸಭೆ ಆದಾಯಕ್ಕೆ ಕತ್ತರಿ ಬಿದ್ದಿದ್ದು, ಕೋಟ್ಯಂತರ ರು. ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈ ಕುರಿತು ಕಳೆದ ಮಾ. 5ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತರು ಸದಸ್ಯರ ಗಮನಕ್ಕೆ ತಂದಿದ್ದಾರೆ. ಮಳಿಗೆಗಳನ್ನು 2002-03ನೇ ಸಾಲಿನಿಂದ ಮರು ಟೆಂಡರ್ ಪ್ರಕ್ರಿಯೆ ಹಾಗೂ ಬಾಡಿಗೆಯನ್ನೂ ಹೆಚ್ಚಿಸದೇ ಸಾಕಷ್ಟು ಅವ್ಯವಹಾರ ನಡೆಸಿರುವುದು ಕಂಡುಬಂದಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದೂ ನಗರಸಭೆ ಆಯುಕ್ತ ಶಿವಕುಮಾರಯ್ಯ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.
-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement