ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

2 ಬೃಹತ್ ಕೆರೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ

Lingaraj Badiger
Updated On : 10 Mar 2014, 11:19 am

ಬ್ಯಾಡಗಿ: ಮುಂಬರುವ ದಿನಗಳಲ್ಲಿ ನೀರಿನ ಅಗತ್ಯತೆಯನ್ನು ಕಂಡುಕೊಂಡಿದ್ದು, 2020ರ ವೇಳೆಗೆ ಪಟ್ಟಣದ ಜನಸಂಖ್ಯೆ 50 ಸಾವಿರ ತಲುಪಲಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ಮಲ್ಲೇಶ್ವರ ಗುಡ್ಡದ ಹಿಂಭಾಗದಲ್ಲಿ ತಲಾ 1 ಟಿಎಂಸಿ ಸಂಗ್ರಹಣಾ ಸಾಮರ್ಥದ 2 ಬೃಹತ್ ಕೆರೆಗಳನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಶಿವಶಂಕರ ನಾಯಕ್ ತಿಳಿಸಿದರು.
ಭಾನುವಾರ ಕೆರೆ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಲವಾರು ಕೆರೆಗಳನ್ನು ಮುಚ್ಚಿ ನಾವೆಲ್ಲರೂ ತಪ್ಪು ಮಾಡಿದ್ದೇವೆ. ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ನೀರಿಗಾಗಿ ಸಾರ್ವಜನಿಕರ ನಡುವೆ ಸಂಘರ್ಷಗಳು ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಾಲ ಇನ್ನೂ ಮಿಂಚಿಲ್ಲ ನಾವೆಲ್ಲರೂ ಸಾಮೂಹಿಕ ಜವಾಬ್ದಾರಿ ತೋರುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದರು.
ಈ ಸ್ಥಳಗಳಲ್ಲಿ ಕೆರೆಗಳನ್ನು ನಿರ್ಮಿಸುವುದರಿಂದ ಸುಮಾರು 8ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಅಲ್ಲದೇ ಕೃಷಿಕರ ಜಾನುವಾರು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೂ ಕುಡಿಯುವ ನೀರು ದೊರೆಯಲಿದೆ ಎಂದರು.
ಕೆರೆಗಳ ನಿರ್ಮಾಣಕ್ಕೆ ಹೋರಾಟ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕೆರೆಗಳ ನಿರ್ಮಾಣಕ್ಕೆ ಮುಂದಾಗಿರುವ ತಾಲೂಕಾಡಳಿತ ಕ್ರಮ ಸ್ವಾಗತಾರ್ಹ. ಈ ಹಿಂದೆಯೂ ಕರ್ನಾಟಕ ರಾಜ್ಯ ರೈತ ಸಂಘ ಅಸುಂಡಿ ಕೆರೆ ತುಂಬಿಸಲು ಒತ್ತಾಯಿಸಿ ಹೋರಾಟ ನಡೆಸಿದ್ದು, ಸರ್ಕಾರ ಅಂದು ನೀಡಿದ ಭರವಸೆಯನ್ನು ಈವರೆಗೂ ಈಡೇರಿಸಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಸಂಘ ಕೆರೆಗಳ ನಿರ್ಮಾಣ ಹಾಗೂ ಹಾಲಿ ಕೆರೆಗಳನ್ನು ತುಂಬಿಸುವ ಕುರಿತು ರಾಜ್ಯವ್ಯಾಪಿ ಹೋರಾಟ ನಡೆಸಲು ಚಿಂತನೆ ನಡೆಸಿದ್ದು, ಸೂಕ್ತವಾದ ತಗ್ಗು ಪ್ರದೇಶಗಳಲ್ಲಿ ಕೆರೆಗಳನ್ನು ನಿರ್ಮಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದರು.
ಭೂಮಿಕೊಟ್ಟರೆ ಪ್ರತಿಭಟನೆ: ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ಸರ್ಕಾರಿ ಗೋಮಾಳಕ್ಕೆ ಮೀಸಲು ನಿಗದಿಯಾಗಿದ್ದರೂ ಈಗಾಗಲೇ ಕೆಲ ಪ್ರದೇಶಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕಾಣದ ಕೈಗಳ ಒತ್ತಡ ಮಣಿದು ಸರ್ಕಾರಿ, ಖಾಸಗಿ ಕಚೇರಿ ಅಥವಾ ಆಶ್ರಯ ಬಡಾವಣೆಗಳ ನಿರ್ಮಾಣಕ್ಕೆ ಗೋಮಾಳ ಭೂಮಿ ಮಂಜೂರ ಮಾಡಿದಲ್ಲಿ ರೈತ ಸಂಘ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.
ಒತ್ತುವರಿ ತೆರವುಗೊಳಿಸಿ: ಬಸವರಾಜ ಸಿರಿಗೆರೆ ಮಾತನಾಡಿ, ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ ಗೋಮಾಳ ಪ್ರದೇಶ ಮೀಸಲಿದ್ದರೂ ರೈತರ ಕಣ್ಣು ತಪ್ಪಿಸಿ ಕಟ್ಟಡಗಳು ತಲೆ ಎತ್ತುತ್ತಿವೆ. ಸರ್ಕಾರಿ ಗೋಮಾಳವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಗಳಿಗೆ ನೀಡದಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಗಿರೀಶ್ ಕೊಪ್ಪದ, ರೇವಣೆಪ್ಪ ಮೋಟೆಬೆನ್ನೂರ, ಮಲಕಪ್ಪ ಹಾದರಗೇರಿ, ಚಿಕ್ಕಪ್ಪ ಛತ್ರದ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement