ಅಧಿಕಾರಿಗಳ ನಿರ್ಲಕ್ಷ್ಯ: ಹಳ್ಳ ಹಿಡೀತು ಕಾಮಗಾರಿ
ಕನ್ನಡಪ್ರಭ,ವಾರ್ತೆ, ಗುತ್ತಲ, ಮಾ. 9
ಸಮೀಪದ ನೆಗಳೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಿತಿ ಕೇಂದ್ರದಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ತರಗತಿಗಳ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಹಿಂದೆ ಕಳಪೆ ಕಾಮಗಾರಿಯಲ್ಲಿ ನಿರ್ಮಾಣಗೊಂಡ ಕಟ್ಟಡದಲ್ಲಿಯೇ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಓದುವಂತಾಗಿದೆ.
2006-07 ಹಾಗೂ 2008ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೆಗಳೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲೆ ಉಳಿಕೆ ಅನುದಾನದ ಸುಮಾರು ರು. 30 ಲಕ್ಷ ಅನುದಾನದಲ್ಲಿ ಬೋಧನಾ ಕೊಠಡಿಗಳ ನಿರ್ಮಾಣಕ್ಕೆ ನಿರ್ಮಿತ ಕೇಂದ್ರಕ್ಕೆ ನೀಡಲಾಗಿತ್ತು.
ಬೋಧನಾ ಕೊಠಡಿಗಳ ಕಾಮಗಾರಿಯನ್ನು ಎರಡು ಹಂತದಲ್ಲಿ ನಿರ್ಮಿತಿ ಕೇಂದ್ರ ಕೈಗೆತ್ತಿಕೊಂಡು, 6 ಕೊಠಡಿಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿತ್ತು. ಆದರೆ, ಮರು ವರ್ಷವೇ ನಿರ್ಮಿಸಿದ ಬೋಧನಾ ಕೊಠಡಿಗಳ ಗೋಡೆಗಳಲ್ಲಿ ಮತ್ತು ಮೇಲ್ಛಾವಣಿಯಲ್ಲಿ ಬಿರುಕು ಕಾಣಿಸಿತು.
ಇದರಿಂದ ಎಚ್ಚೆತ್ತುಗೊಂಡ ನಿಲಯದ ಮುಖ್ಯಸ್ಥರು, ಎಸ್ಡಿಎಂಸಿ, ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ದೂರಿಗೆ ಎಚ್ಚೆತ್ತುಗೊಂಡ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ನಿರ್ಮಿತಿ ಕೇಂದ್ರದ ಅಧಿಕಾರಿಗಳ ಮೇಲೆ ಒತ್ತಡ ತಂದು ನಿರ್ಮಿಸಿದ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡುವಂತೆ ತಿಳಿಸಿತ್ತು.
ಆ ಪ್ರಕಾರವಾಗಿ ನಿರ್ಮಿತ ಕೇಂದ್ರದಡಿ ನಿರ್ಮಿಸಿದ ಕಳಪೆ ಕಾಮಗಾರಿ ಕಟ್ಟಡವನ್ನು ತೆಗೆದುಹಾಕದೇ ಮತ್ತೊಂದು ಜಾಗದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ನಿರ್ಮಿತಿ ಕೇಂದ್ರ ನೂತನ ಬೋಧನಾ ಕೊಠಡಿಗಳ ಕಟ್ಟಡಕ್ಕೆ ಚಾಲನೆ ನೀಡಿತು. ಇನ್ನೇನು ಕಾಮಗಾರಿ ಮುಗಿಯುವ ಹಂತದದಲ್ಲಿದ್ದಾಗ ಮತ್ತೆ ಬೋಧನಾ ಕೊಠಡಿಗಳ ನೂತನ ಕಟ್ಟಡ ಕಾಮಗಾರಿಯೂ ಕಳಪೆಯಾಗಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.
ಈಗ ನಿರ್ಮಾಣವಾಗಿರುವ ನೂತನ ಕಟ್ಟಡದ ಮುಂಭಾಗದಲ್ಲಿ ನಿಂತು ಒಮ್ಮೆ ನೋಡಿದರೆ ಇದೇನು ಎಂಜಿನಿಯರ್ ಸಹಾಯವಿಲ್ಲದೆ ನಿರ್ಮಾಣ ಮಾಡಿದ ಕಟ್ಟಡವೋ ಎಂಬ ಶಂಕೆ ಮೂಡುವುದರಲ್ಲಿ ಅನುಮಾನವಿಲ್ಲ. ಕಟ್ಟಡದ ಒಳಭಾಗದಲ್ಲಿ ಕಣ್ಣು ಹಾಯಿಸಿದರೆ ಮೇಲ್ಛಾವಣಿ ಕೆಲವೇ ದಿನಗಳಲ್ಲಿ ಬಿದ್ದು ಹೋಗುತ್ತದೆ ಎನ್ನುವ ಭಯ ಉಂಟಾಗುತ್ತದೆ. ಹೀಗಾಗಿ ಉತ್ತಮ ಬೋಧನಾ ಕೊಠಡಿ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳಿಗೆ ಗಗನಕುಸುಮವಾಗಿ ಪರಿಣಮಿಸಿವೆ.
ಲಕ್ಷಾಂತರ ರು. ಅನುದಾನ ಖರ್ಚು ಮಾಡಿದರೂ ಇದುವರೆಗೆ ಸುಸಜ್ಜಿತ ತರಗತಿಯ ಕೋಣೆ ನಿರ್ಮಾಣ ಮಾಡಲು ಸಾಧ್ಯವಾಗದಿರುವುದು ನಿರ್ಮಿತಿ ಕೇಂದ್ರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಿಂತಿದ್ದು, ಅಧಿಕಾರಿಗಳ ಸಾಮರ್ಥ್ಯವನ್ನೂ ತೋರಿಸುವಂತಿದೆ.