ಒಳಚರಂಡಿ, ತ್ಯಾಜ್ಯ ಶುದ್ಧೀಕರಣ ಘಟಕ ಪೂರ್ಣ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮಾ. 9
ಸ್ವಚ್ಛ ಹಾಗೂ ಸುಂದರ ರಾಣಿಬೆನ್ನೂರು ನಗರ ನಿರ್ಮಾಣದ ಕನಸು ನನಸಾಗುವ ಕಾಲ ಬಂದಿದೆ. ಒಳಚರಂಡಿ ಹಾಗೂ ತ್ಯಾಜ್ಯ ಸಂಸ್ಕರಣ ಘಟಕ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಆರೋಗ್ಯಕರ ವಾತಾವರಣಕ್ಕೆ ಅನುಕೂಲಕರವಾಗಿದೆ.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಧೆ (ಕೆಯುಐಡಿಎಫ್ಸಿ), ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮದ (ಎನ್ಕೆಯುಎಸ್ಐಪಿ) ಅಡಿಯಲ್ಲಿ ಏಶಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ರು. 35.53 ಕೋಟಿ ವೆಚ್ಚದಲ್ಲಿ ರಾಣಿಬೆನ್ನೂರು ನಗರದ 12,500 ಮನೆಗಳಿಗೆ ಹೊಸದಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಹುಲ್ಲತ್ತಿ ರಸ್ತೆಯ ಮುಕ್ತಿಧಾಮದ ಹತ್ತಿರ (7.50 ಎಂಎಲ್ಡಿ) ದಿನಕ್ಕೆ 70 ಲಕ್ಷ 50 ಸಾವಿರ ಲೀಟರ್ನಷ್ಟು ತ್ಯಾಜ್ಯ ನೀರು ಸಂಗ್ರಹಿಸಿ, ಶುದ್ಧೀಕರಿಸಿ ಅದರಲ್ಲಿ ಬರುವ ತ್ಯಾಜ್ಯವನ್ನು ಪ್ರತ್ಯೇಕಿಸುವ ಘಟಕ ಕಾಮಗಾರಿ ಪೂರ್ಣಗೊಂಡಿದೆ.
ಉಳಿದ ನೀರನ್ನು ಹಳಕ್ಕೆ ಹರಿಸಲು ಅಥವಾ ರೈತರು ತಮ್ಮ ಹೊಲಗಳಿಗೆ ಹಾಯಿಸಿಕೊಳ್ಳಲು ಬೇಡಿಕೆ ಇಟ್ಟಲಿ ನೀಡುವುದಕ್ಕಾಗಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಗ್ರಹ ತೊಟ್ಟಿ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ಒಳಚರಂಡಿ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು ಸಂಪರ್ಕ ಪಡೆಯದಿರುವವರು ಶೀಘ್ರದಲ್ಲಿ ಪಡೆಯಲು ಸೂಕ್ತ ಸಮಯವಾಗಿದೆ.
ಅಭಿವೃದ್ಧಿ ಕಾಮಗಾರಿ: ರು. 1.59 ಕೋಟಿ ಮೊತ್ತದಲ್ಲಿ ನಗರದ ಕೊಳಚೆ ಪ್ರದೇಶಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ರು. 2 ಕೋಟಿ ಮೊತ್ತದಲ್ಲಿ ಕೆರೆ ಅಭಿವೃದ್ಧಿ, ರು. 1,31 ಕೋಟಿ ಮೊತ್ತದಲ್ಲಿ ನಗರದ ಪಶ್ಚಿಮ ಭಾಗದಲ್ಲಿರುವ ದನದ ಮಾರುಕಟ್ಟೆ ಆವರಣದಲ್ಲಿ ರು. 1.31 ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿವೆ. ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಸ್ವ-ಸಹಾಯ ಸಂಘಗಳ ಮೂಲಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಆರ್ಥಿಕವಾಗಿ ಬಡ ಕುಟುಂಬದವರನ್ನು ಬಲಪಡಿಸುವುದಕ್ಕಾಗಿ ರು. 40.48 ಕೋಟಿ ಕಾಯ್ದಿರಿಸಲಾಗಿದೆ ಎಂದು ನಗರಸಭೆಯ ಪ್ರಭಾರಿ ಅಧ್ಯಕ್ಷ ಶಿವಣ್ಣ ಮಣೇಗಾರ ತಿಳಿಸಿದರು.
ಯೋಜನೆ ಅಡಿಯಲ್ಲಿ ನಗರದಾದ್ಯಂತ ಒಟ್ಟು 65.14 ಕಿ.ಮೀ. ಉದ್ದದ ಒಳಚರಂಡಿ ಕೊಳವೆ ಮಾರ್ಗದಲ್ಲಿ ಇದುವರೆಗೂ 52.61 ಕಿ.ಮೀ. ಕೊಳವೆ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2573 ಮ್ಯಾನ್ಹೊಲ್ಗಳನ್ನು ಅಳವಡಿಸಬೇಕಾಗಿದೆ. ಅದರಲ್ಲಿ ಇಲ್ಲಿಯವರೆಗೂ 2120 ಮ್ಯಾನಹೋಲ್ಗಳನ್ನು ನಿರ್ಮಿಸಿದ್ದು, 1984 ಮ್ಯಾನಹೋಲ್ಗಳು ಸೇವೆಗೆ ಸಿದ್ದವಾಗಿವೆ. 4887 ರಿಸೀವಿಂಗ್ ಚೇಂಬರ್ಗಳಲ್ಲಿ 2580 ರಿಸೀವಿಂಗ್ ಚೇಂಬರ್ಗಳು ಮುಕ್ತಾಯಗೊಂಡಿವೆ. ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಪ್ರಭುದೇವ್ ಜಿ.ಎಂ., ತಿಳಿಸಿದರು.
-ಸಾಬ್ಜನ್ ಇಟಗಿ