ಟೊಮೆಟೋ ಬೆಳೆದು ಕೈ ಖಾಲಿ ಮಾಡಿಕೊಂಡ ರೈತರು
ಕನ್ನಡಪ್ರಭ ವಾರ್ತೆ, ಗುತ್ತಲ, ಮಾ. 9
ರೈತ ಇಂದು ಒಂದಿಲ್ಲೊಂದು ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. ಯಾವ ಬೆಳೆ ಬೆಳೆದರೂ ಅದು ಕೈಗೆ ಬರುವ ವೇಳೆಗೆ ಬೆಲೆ ಇಳಿದು ಮಾಡಿದ ಸಾಲ ತೀರಿಸಲಾಗದೇ ಹತಾಶರಾಗುವಂತಾಗಿದೆ. ಗುತ್ತಲ ಹೋಬಳಿ ಸುತ್ತಮುತ್ತ ಈ ಬಾರಿ ಅಪಾರ ಟೊಮೆಟೋ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಇಳಿದಿದ್ದರಿಂದ ಹೊಲದಲ್ಲೇ ಬೆಳೆ ಉಳಿಯುವಂತಾಗಿದೆ. ಇದು ರೈತರನ್ನು ಆತಂಕಕ್ಕೆ ಸಿಲುಕಿಸಿದೆ.
ಹಾವೇರಿ ಜಿಲ್ಲೆ ಅರೆಮಲೆನಾಡು ಪ್ರದೇಶವಾಗಿದ್ದರಿಂದ ಒಂದು ವರ್ಷ ಅತಿವೃಷ್ಟಿಯಾದರೆ, ಮತ್ತೊಂದು ವರ್ಷ ಅನಾವೃಷ್ಟಿ. ಹೀಗೆ ಸತತ ಮೂರು ವರ್ಷಗಳ ಕಾಲ ಯಾತನೆ ಅನುಭವಿಸಿದ ಈ ಭಾಗದ ರೈತರಿಗೆ ಇನ್ನೂ ಶುಕ್ರದೆಸೆ ಆರಂಭವಾಗಿಲ್ಲ. ಕೇವಲ ಕಷ್ಟದಲ್ಲಿಯೇ ಕಾಲ ನೂಕುತ್ತಿದ್ದ ಸಂದರ್ಭದಲ್ಲಿ ಗೋವಿನಜೋಳ, ಹತ್ತಿ, ಸೂರ್ಯಕಾಂತಿ ಹೀಗೆ ಲಾಭದಾಯಕ ಬೆಳೆಗಳಿಗೆ ಮಾರುಹೋಗಿ ಸಕಾಲದಲ್ಲಿ ಮಳೆಯಾಗದೇ ಕೈ ಸುಟ್ಟುಕೊಂಡಿದ್ದಾರೆ. ರೈತ ಇದ್ದ ಪರಿಸ್ಥಿಯಲ್ಲಿಯೇ ಸುಧಾರಿಸಿಕೊಂಡು ತೋಟಗಾರಿಕೆ ಬೆಳೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾನೆ. ಟೊಮೆಟೋ ಬೆಳೆ ಬೆಳೆಯಲು ಪ್ರಾರಂಭಿಸಿ ಈಗ ಅದೂ ಕೈಗೆ ಹತ್ತದೇ ಸಂಕಷ್ಟಕ್ಕೆ ಒಳಗಾಗಿದ್ದಾನೆ.
ಹತಾಶೆ: ಗುತ್ತಲ ಸೇರಿದಂತೆ ಹೋಬಳಿಗೆ ಒಳಪಡುವ ಹಾಲಗಿ, ಮರೋಳ, ಬೆಳವಗಿ, ಕೋಡಬಾಳ, ನೆಗಳೂರು, ಹಾವನೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಟೊಮೆಟೋ ಬೆಳೆಯನ್ನು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಯೋಗ್ಯಬೆಲೆ ಸಿಗದೇ ಸಿಕ್ಕಷ್ಟಕ್ಕೆ ಉತ್ಪನ್ನ ಮಾರಾಟ ಮಾಡಿ ಕೈ ಖಾಲಿ ಮಾಡಿಕೊಳ್ಳುತ್ತಿದ್ದಾನೆ. ಮಾಡಿದ ಖರ್ಚು ಸಿಗದೇ ಹಿಡಿಶಾಪ ಹಾಕುತ್ತಿದ್ದಾನೆ. ಕೃಷಿ ಕಾಯಕವೇ ಬೇಡ ಎಂಬಷ್ಟು ಹತಾಶನಾಗಿದ್ದಾನೆ.
ಹಳ್ಳಿಗಾಡಿನಲ್ಲಿ ಬೆಳೆದು ಶಹರದ ಮಾರುಕಟ್ಟೆಗೆ ಬಂದರೆ ಅಲ್ಲಿಯೂ ಇವರನ್ನು ಮಾತನಾಡಿಸುವವರಿಲ್ಲ. ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೋಗೆ ರು. 1, ರು. 2ಗೆ ಕೇಳುತ್ತಿಲ್ಲ. ಇದೇ ಬೆಳೆ ನಂಬಿಕೊಂಡು ರೈತರು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಬೆಳೆಗಾರರಲ್ಲಿ ಮೂಡಿದೆ. ಹೊಲದಿಂದ ವಾಹನ ಮೂಲಕ ನಗರಕ್ಕೆ ಟೊಮೆಟೋ ತಂದರೆ ಇಲ್ಲಿ ವಾಹನ ಬಾಡಿಗೆ ಖರ್ಚು ಹುಟ್ಟುತ್ತಿಲ್ಲ. ವ್ಯಾಪಾರಿಗಳು ಕೇಳಿದ ದರಕ್ಕೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಕುಳಿತು ಮಾರಾಟ ಮಾಡಬೇಕು. ಹೇಗೆ ಮಾಡಿದರೂ ಸಿಗುವುದು ಮಾತ್ರ ಸಿಕ್ಕಾಸು ಎಂಬಂತಾಗಿದೆ. ಇದರಿಂದ ಈ ಭಾಗದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಸರ್ಕಾರ ಬರಬೇಕಿದೆ.
ಜಾನುವಾರು ಮೇವಾಗುತ್ತಿದೆ: ಅಗ್ಗದ ಬೆಲೆಗೆ ಟೊಮೆಟೋ ಮಾರಾಟವಾಗುತ್ತಿರುವುದರಿಂದ ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಒಂದು ಗುಂಟೆಯಲ್ಲಿ ಟೊಮೆಟೋ ಬೆಳೆಯಬೇಕೆಂದರೆ ಕನಿಷ್ಠ ರು. 7ರಿಂದ ರು. 8 ಸಾವಿರ ಖರ್ಚಾಗುತ್ತದೆ. ಖರ್ಚು-ವೆಚ್ಚದ ಲೆಕ್ಕಾಚಾರ ಮಾಡಿದರೆ ಬೆಳೆಗಾರನಿಗೆ ಸಿಗುವುದು ಏನಕ್ಕೂ ಸಾಲದು. ಅಲ್ಲದೇ ಕಳೆದೊಂದು ವಾರದಿಂದ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕುಸಿತ ಕಂಡಿರುವುದರಿಂದ ಬೆವರು ಸುರಿಸಿ ಬೆಳೆದ ಬೆಳೆಯನ್ನು ಅನಿವಾರ್ಯವೆಂಬಂತೆ ದನಕರುಗಳಿಗೆ ಹಾಕುತ್ತಿದ್ದಾರೆ.
-ಕುಮಾರಸ್ವಾಮಿ ಯಳವತ್ತಿಮಠ