ನಾಳೆಯಿಂದ ಆರಾಧನಾ ಮಹೋತ್ಸವ
ಗುತ್ತಲ: ಧೀರೇಂದ್ರತೀರ್ಥ ಶ್ರೀಪಾದಂಗಳವರ 229ನೇ ಆರಾಧನಾ ಮಹೋತ್ಸವ ಹಾಗೂ ಪಂಚರಥೋತ್ಸವ ಮಾ.11ರಿಂದ 16ರ ವರೆಗೆ ಸುಬುಧೇಂದ್ರತೀರ್ಥ ಶ್ರೀಗಳ ಸಮ್ಮುಖದಲ್ಲಿ ರಾಘವೇಂದ್ರ ಶ್ರೀ ಧೀರೇಂದ್ರ ಸುಶೀಲೇಂದ್ರತೀರ್ಥರ ಬೃಂದಾವನ ಹೊಸರಿತ್ತಿಯ ಮಠದಲ್ಲಿ ಜರುಗಲಿದೆ.
ಪ್ರತಿನಿತ್ಯ ಬೆಳಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ಅಲಂಕಾರ, ಮಠದ ಸಂಸ್ಥಾನ ಪೂಜೆ, ನೈವೇದ್ಯ, ಹಸ್ತೋದಕ, ಸಂಜೆ ಪಂಡಿತರಿಂದ ಉಪನ್ಯಾಸ, ರಜತ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.11ರಂದು ಸಂಜೆ 6ಕ್ಕೆ ಧಾನ್ಯಪೂಜಾ, ಗೋಪೂಜಾ, ಧ್ವಜಾರೋಹಣ, ಸ್ವಸ್ತಿವಾಚನ ಹಾಗೂ ಮಂಗಳಾರತಿ ನಡೆಯಲಿದೆ. ಮಾ.12ರಂದು ಬೆಳಗ್ಗೆ 10 ಗಂಟೆಗೆ ಪಂಡಿತರಿಂದ ಭಾಗವತ ಪ್ರವಚನ ನಡೆಯಲಿದೆ. ಅಂದು ಸಂಜೆ 7 ಗಂಟೆಗೆ ಕೃಷ್ಣೇಂದ್ರ ವಾಡೇಕರ್, ಸಂಪ್ರೀತಮೋಹನ ಹಾಗೂ ರಾಜೇಶ್ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಾ.13ರಂದು ಸಂಜೆ ಉಭಯಶ್ರೀಗಳ ಮೆರವಣಿಗೆ ಸಕಲವಾದ್ಯಗಳೊಂದಿಗೆ ನಡೆಯುವುದು. ಮಾ.14ರಂದು ಪ್ರತಿಮಾ ಜೋಷಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆದಿತ್ಯ ಜೋಷಿಯಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಲಿದೆ. ಮಾ.15ರಂದು ಬೆಳಗ್ಗೆ 10 ಗಂಟೆಗೆ ಹೊಸರಿತ್ತಿಯ ಪ್ರಮುಖ ಬೀದಿಗಳಲ್ಲಿ ಮಹಾರಥೋತ್ಸವ ನಡೆಯಲಿದೆ. ಮಾ.16ರಂದು ಬೆಳಗ್ಗೆ 9ಕ್ಕೆ ಸತ್ಯನಾರಾಯಣ ಪೂಜೆ ನೆರವೇರಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಹಾವೇರಿ: ಇಂದು ವಾರ್ಷಿಕ ಸ್ನೇಹ ಸಮ್ಮೇಳನ
ಹಾವೇರಿ: ಕ್ರಿಶ್ಚಿಯನ್ ಮಿಶನರೀಸ್ ಮೆಮೊರಿಯಲ್ ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆ ಮೋಟೆಬೆನ್ನೂರು ಹಾಗೂ ಲ್ಯೂಡೋಲ್ಪ ಪ್ರೌಢಶಾಲೆ ಹಾವೇರಿ ಆಶ್ರಯದಲ್ಲಿ ಶ್ರೀ ಮಹಾಸರಸ್ವತಿ ಪೂಜೆ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಮಾ. 10ರಂದು ನಡೆಯಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಕ್ಕೇರಿಮಠದ ಸದಾಶಿವ ಶ್ರೀಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಲ್ಯೂಡೋಲ್ಪ ಪ್ರೌಢಶಾಲೆಯ ಕಾರ್ಯದರ್ಶಿ ಎಸ್.ಜೆ. ಕೆಲೂರ ವಹಿಸುವರು. ಅತಿಥಿ ಉಪನ್ಯಾಸಕರಾಗಿ ಸಾಹಿತಿ ಡಾ. ಸಂಗಮೇಶ ತಮ್ಮನಗೌಡರ, ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಡಾ. ಮಾಧುರಿ ದೇವಧರ, ಪ್ರಕಾಶ ಶಟ್ಟಿ, ಬಿ.ಬಿ. ಅಪ್ಪಣ್ಣನವರ, ವೈ.ಬಿ. ಆಲದಕಟ್ಟಿ, ಎಲ್.ಎಸ್. ಅರಳಿಹಳ್ಳಿ, ಶಿವಯೋಗಿ ಅರಿಶಿಣದ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.