ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪಾರ್ಕಿಂಗ್ ಸ್ಥಳವಾಗಿರುವ ಸರ್ಕಾರಿ ಆಸ್ಪತ್ರೆ ಆವರಣ

Lingaraj Badiger
Updated On : 10 Mar 2014, 11:09 am

ಸಾವಿರಾರು ಜನರ ಜೀವನಕ್ಕೆ ಬದುಕಿನ ಭರವಸೆ ಮೂಡಿಸುವ ಶಿಗ್ಗಾಂವಿಯ ತಾಲೂಕು ಆಸ್ಪತ್ರೆ ಪ್ರವೇಶ ದ್ವಾರ ದ್ವಿಚಕ್ರ ವಾಹನದ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಆಸ್ಪತ್ರೆಯ ಬದಲು ವಾಹನ ನಿಲ್ಲಿಸುವ ಜಾಗಕ್ಕೆ ಬಂದ ಅನುಭವವಾಗುತ್ತಿದ್ದು, ಆಸ್ಪತ್ರೆಗೆ ಬರುವವರಿಗೆ ಅನಗತ್ಯ ಕಿರಿಕಿರಿ ಉಂಟಾಗುತ್ತಿದೆ.
ಶಿಗ್ಗಾಂವಿ ಪುರಸಭೆ ಕಚೇರಿ ಎದುರಲ್ಲಿ ಇರುವ ತಾಲೂಕು ಆಸ್ಪತ್ರೆ ಎಲ್ಲ ಬಗೆಯ ರೋಗಗಳಿಗೆ ಚಿಕಿತ್ಸೆ ನೀಡಬಲ್ಲ ಪರಿಣಿತ ವೈದ್ಯರು ಹಾಗೂ ನೂರು ಹಾಸಿಗೆ ಸಾಮರ್ಥ್ಯ ಹೊಂದಿದ ಆಸ್ಪತ್ರೆಯಾಗಿದೆ. ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಎಂಬಂತೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ, ನಿತ್ಯ ಶಿಗ್ಗಾಂವಿ ಹೊರತುಪಡಿಸಿ ನೆರೆಯ ಸವಣೂರು, ಕುಂದಗೋಳ, ಕಲಘಟಗಿ, ಮುಂಡಗೋಡ ಭಾಗದಿಂದಲೂ ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಆದರೆ, ಆಸ್ಪತ್ರೆಯ ಪ್ರವೇಶ ದ್ವಾರವನ್ನು ದಾಟಿ ಒಳಗಡೆ ಹೋಗಲು ಪ್ರಯಾಸ ಪಡುವಂತಾಗಿದೆ.
ಪ್ರವೇಶ ದ್ವಾರದ ಮುಂಭಾಗದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ನಂತರ ನಾಪತ್ತೆಯಾಗುತ್ತಾರೆ. ವಾಹನ ನಿಲ್ಲಿಸಲು ಸುರಕ್ಷಿತ ಸ್ಥಳ ಎಂಬಂತಾಗಿದ್ದು, ಇದು ಆಸ್ಪತ್ರೆ ವಾತಾವರಣ ಹಾಳಾಗುವಂತೆ ಮಾಡಿದೆ.
ಇದರಿಂದ ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ರೋಗಿಗಳನ್ನು ಸಾಗಿಸಲು ಮತ್ತು ಹೊರಗಡೆಯಿಂದ 108 ವಾಹನ ಬರಲು, ರೋಗಿಗಳನ್ನು ಬೇರೆ ವಾರ್ಡಿಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ದ್ವಿಚಕ್ರ ವಾಹನಗಳು, ಕಾರು, ಟೆಂಪೋಗಳನ್ನು ಆಸ್ಪತ್ರೆಯ ಅಂಗಳದಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಲಾಗುತ್ತಿದೆ. ಪಕ್ಕದಲ್ಲಿರುವ ಪೊಲೀಸ್ ಠಾಣೆ, ಪುರಸಭೆ ಸೇರಿದಂತೆ ಮಾರ್ಕೆಟ್ಗೆ ಹೋಗುವವರೂ ಆಸ್ಪತ್ರೆ ಆವರಣವನ್ನೇ ಪಾರ್ಕಿಂಗ್ ಪ್ರದೇಶವನ್ನಾಗಿಸಿಕೊಂಡಿದ್ದಾರೆ. ಸವಣೂರು ಭಾಗಕ್ಕೆ ನೌಕರಿಗೆ ಹೋಗುವ ಜನ ಕೂಡ ತಮ್ಮ ವಾಹನಗಳನ್ನು ಆಸ್ಪತ್ರೆಯ ಅಂಗಳದಲ್ಲಿ ನಿಶ್ಚಿಂತೆಯಾಗಿ ನಿಲ್ಲಿಸಿ ಅಲ್ಲಿಂದ ಕಾಲ್ಕೀಳುತ್ತಾರೆ. ಹೀಗಾಗಿ, ಸರ್ಕಾರಿ ಆಸ್ಪತ್ರೆ ಎಂಬುದು ಪಾರ್ಕಿಂಗ್ ಪ್ರದೇಶವಾಗಿದೆ.
ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ, ಆಸ್ಪತ್ರೆಗೆ ಬರುವ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದವರ ವಾಹನಗಳಿಗೆ ಪಾರ್ಕಿಂಗ್ಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕಿದೆ. ಅದಕ್ಕಾಗಿ ಕಾವಲುಗಾರರೊಬ್ಬರನ್ನು ನೇಮಿಸಬೇಕು. ಸಾರ್ವಜನಿಕರಿಗೆ ಬೇರೆ ಪಾರ್ಕಿಂಗ್ ಸ್ಥಳ ನಿಗದಿ ಮಾಡಿ, ರೋಗಿಗಳಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಬೇಕು.
- ಸುಭಾಸ್ ಧನೂಜಿ, ಶಿಗ್ಗಾಂವಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement