ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಹಿಳೆಯನ್ನು ಸ್ವಾವಲಂಬಿಯಾಗಿ ಬದುಕಲು ಬಿಡಿ: ಕೊಪ್ಪದಮಠ

Lingaraj Badiger
Updated On : 10 Mar 2014, 11:19 am

ಬ್ಯಾಡಗಿ: ಮಹಿಳೆ ಸ್ವಾವಲಂಬಿಯಾಗಿ ಬದುಕಲು ಬಿಡಬೇಕು. ಆದರೆ, ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಸ್ವೆಚ್ಛಾಚಾರದ ಬಣ್ಣ ಹಚ್ಚುವ ಮೂಲಕ ಆಕೆಯನ್ನು ಸಂಕೋಲೆಯಲ್ಲಿಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ ನೀಲಮ್ಮ ಕೊಪ್ಪದಮಠ ವಿಷಾದಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಿನ ಶಿಡೇನೂರ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರನ್ನು ನೋಡುತ್ತಿರುವ ದೃಷ್ಟಿಕೋನ ಬದಲಾಗಬೇಕಿದೆ. ಸಮಾನತೆ ಎಂಬುದು ಕೇವಲ ನಿಘಂಟುವಿನ ಪದಕ್ಕೆ ಸೀಮಿತವಾಗಬಾರದು. ಮಹಿಳಾ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಗೊಳ್ಳಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸಿದ ಅವರು, ಜೀವನದುದ್ದಕ್ಕೂ ಹೋರಾಟದ ಬದುಕನ್ನು ಸಾಗಿಸುತ್ತಿರುವ ಮಹಿಳೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾಳೆ. ಆದರೆ ಆಕೆಯ ಶ್ರಮವನ್ನು ಪರಿಗಣಿಸಿದ ಸಮಾಜ ತಾತ್ಸಾರ ಮನೋಭಾವದಿಂದ ಕಾಣುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎನ್. ಯಮನಕ್ಕನವರ ಮಾತನಾಡಿ, ಮಹಿಳೆಗೆ ಎಲ್ಲ ರೀತಿಯ ಸಮಾನತೆ ಘೋಷಿಸಿ ಆಕೆಯನ್ನು ಸಬಲೀಕರಣಗೊಳಿಸುವ ಮಾತುಗಳು ಕೇಳಿ ಬರುತ್ತಿದ್ದರೂ ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಹೊರ ಬರಲಾರದೇ ನರಳುತ್ತಿರುವ ಉದಾಹರಣೆಗಳು ಬೇಕಾದಷ್ಟಿವೆ ಎಂದು ಹೇಳಿದರು.
ಲಕ್ಷ್ಮೀ ಪತ್ತಾರ ಮಾತನಾಡಿ, ಸ್ವಾತಂತ್ರ್ಯಕ್ಕೂ ಮುನ್ನ ಬಾಲ್ಯ ವಿವಾಹ, ಸತಿ ಸಹಗಮನ, ಜೀತ ಪದ್ಧತಿ, ದೇವದಾಸಿ ಹಾಗೂ ಬೆತ್ತಲ ಸೇವೆ ಇನ್ನಿತರ ಅನಿಷ್ಟ ಪದ್ಧತಿಗಳು ಮಹಿಳೆಯನ್ನು ಶೋಷಣೆಗೆ ಒಳಗಾಗುವಂತೆ ಮಾಡಿದ್ದವು. ಸ್ವಾತಂತ್ರ್ಯಾನಂತರ ಇವುಗಳಿಂದ ಮುಕ್ತವಾದರೂ ವರದಕ್ಷಿಣೆ ಪದ್ಧತಿ ಅದೆಷ್ಟೋ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಕೆಲಸ ನಿರ್ವಹಿಸಲು ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಸಾಮೂಹಿಕ ಆತ್ಯಾಚಾರದಂತಹ ಇತ್ತೀಚಿನ ಅಮಾನವೀಯ ಪ್ರಕರಣಗಳು ದೇಶವನ್ನೇ ನಲುಗುವಂತೆ ಮಾಡಿದ್ದು, ಮಹಿಳೆ ಒಂಟಿಯಾಗಿ ಹೊರ ಹೋಗುವುದಿರಲಿ ಮನೆಯಲ್ಲಿರಲೂ ಚಿಂತಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಸಂಘಟನಾತ್ಮಕ ಹಾಗೂ ತಾತ್ವಿಕ ಹೋರಾಟ ಅಗತ್ಯವಾಗಿದೆ ಎಂದರು. ಸಿ.ಬಿ. ಚೌಶೆಟ್ಟಿ, ನಾಗರಾಜ ಬಿನ್ನಾಳ, ಎಂ.ಆರ್.ಪಾಟೀಲ, ಎಂ.ಎಸ್. ಕದರಮಂಡಲಗಿ, ಎಂ.ಎಚ್. ಹುಲ್ಲೂರ, ಎಸ್.ಬಿ. ಸುಳ್ಳಳ್ಳಿ, ಶಾಂತಲಾ ಪಾಟೀಲ, ಸಿ.ಎಸ್. ಪಾಟೀಲ ಪಿ.ಜೆ. ಮೆಳ್ಳಾಗಟ್ಟಿ, ತಿಪ್ಪೇಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement