ಮಹಿಳೆಯರಿಗೆ ತಮ್ಮ ಕರ್ತವ್ಯ ಅರಿವಿರಲಿ: ಪದ್ಮಾವತಿ
ಶಿಗ್ಗಾಂವಿ: ಮಹಿಳೆಯರು ಬರಿ ನನಗೆ ಹಕ್ಕಿದೆ ಎಂದು ಹೋರಾಡಬಾರದು, ನಮ್ಮ ಕರ್ತವ್ಯಗಳ ಅರಿವು ಇರಬೇಕು. ಮಹಿಳೆಯರು ಪುರುಷರ ವಿರೋಧಿಗಳಲ್ಲ. ಆದರೆ, ಪುರುಷರಿಗೆ ಸಮನಾಗಿ ಸಹಬಾಳ್ವೆಯ ಅಗತ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಅಧಿಕಾರಿ ಪದ್ಮಾವತಿ ಜಿ. ಹೇಳಿದರು.
ಪಟ್ಟಣದ ಗಾಂಧಿನಗರ ಪ್ಲಾಟ್ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಸಲಹೆಗಾರರಾದ ನ್ಯಾಯವಾದಿ ಕೆ.ಎನ್. ಭಾರತಿ ಮಾತನಾಡಿ, ಮಹಿಳೆ-ಮಹಿಳೆಯರಲ್ಲಿ ಬಾಂಧವ್ಯದ ಕೊರತೆ ಇದೆ. ಮಹಿಳೆಯರು ಮಹಿಳೆಯರಿಗೆ ಬೆಂಬಲವಾಗಿ ನಿಂತರೆ ಮಹಿಳಾ ದೌರ್ಜನ್ಯ ತಡೆಯಲು ಸಾಧ್ಯ. ಮಹಿಳೆಯರಿಗಾಗಿ ಸಾಕಷ್ಟು ಕಾನೂನುಗಳಿವೆ ಅವುಗಳನ್ನು ಅರಿತುಕೊಳ್ಳಿ. ಆದರೆ, ಆ ಕಾನೂನುಗಳು ದುರುಪಯೋಗವಾಗದಂತೆ ಸದ್ಬಳಕೆಯಾಗಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕಿ ಎಂ.ಎಚ್. ದೇವಗಿರಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯವರು ಕೆಟ್ಟವರು ಎರಡೂ ಪಂಗಡದವರೂ ಇರುತ್ತಾರೆ. ಆದರೆ, ಮಕ್ಕಳಿಗೆ ಒಳ್ಳೆಯವರ ಆದರ್ಶಗಳನ್ನು ತುಂಬಿಕೊಳ್ಳುವಂತೆ ಪ್ರೇರೆಪಣೆ ನೀಡಬೇಕು. ನಾವು ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ತುಂಬಬೇಕು ಎಂದರು.
ಚೆನ್ನಮ್ಮ ಸಿ.ಎನ್., ಜ್ಯೋತಿ ಸಣ್ಣಕ್ಕಿ, ಕಲ್ಪನಾ ಕೇಸ್ತಿ, ಪ್ರಮಿಳಾ ಕೋಟಿ, ಲಕ್ಷ್ಮಿ ಬಗಾಡೆ, ಶಕಿಲಾ ಬಾಲೆಹೊಸೂರ, ವಿಜಯಲಕ್ಷ್ಮಿ ಅಳ್ಳಿಗಿಡದ, ಶೈಲಜಾ ತಳವಾರ, ಅನ್ನಪೂರ್ಣಾ ಹಡಪದ ಮುಂತಾದ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.