ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಹಿಳೆಯರು ಭಾರತೀಯ ಸಂಸ್ಕೃತಿ ಅಳವಡಿಸಿಕೊಳ್ಳಿ

Lingaraj Badiger
Updated On : 10 Mar 2014, 11:15 am

ಹಾನಗಲ್ಲ: ಜಾಗತೀಕರಣದ ವೇಗದಲ್ಲಿರುವ ಈ ಕಾಲದಲ್ಲಿಯೂ ಮಹಿಳೆ ಮನೆ ಬೆಳಗುವ ಮಹಾತಾಯಿಯಾಗುವ ಅಗತ್ಯವಿದ್ದು, ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದು ಆವಶ್ಯಕ ಎಂದು ಸರಸ್ವತಿ ಮಹಿಳಾ ಮಂಡಳದ ಗೌರವಾಧ್ಯಕ್ಷೆ ನೀಲಮ್ಮ ಉದಾಸಿ ಕರೆ ನೀಡಿದರು.
ಹಾನಗಲ್ಲಿನಲ್ಲಿ ಸರಸ್ವತಿ ಮಹಿಳಾ ಮಂಡಳ ಏರ್ಪಡಿಸಿದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಅಸ್ತಿತ್ವವನ್ನು ಮೆರೆಯುತ್ತಿದ್ದಾಳೆ. ಜಾಗತೀಕರಣ ಹಾಗೂ ಸಬಲೀಕರಣದ ಕಾಲದಲ್ಲಿ ಜಾಗೃತಿ ಮೂಡಿಸಿ ಸಮಾಜದಲ್ಲಿ ಮಹಿಳೆಗೆ ಸಮಾನ ಸ್ಥಾನಮಾನಗಳು ಸಿಗುವಂತೆ ಕಾಳಜಿ ವಹಿಸಬೇಕಾಗಿದೆ. ಅಂತಃಕರಣದ ಮಾತುಗಳು ಕೇಳುತ್ತಿದ್ದರೂ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುವುದು ವಿಷಾದದ ಸಂಗತಿ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಮಹಿಳೆ ಅಬಲೆ ಅಲ್ಲ. ಸಾಮಾಜಿಕ ಬದಲಾವಣೆಯಲ್ಲಿ ಈಗ ಮಹಿಳೆ ತನ್ನನ್ನು ಪುರುಷ ಸಮಾನವಾಗಿ ಬೆಳೆಸಿಕೊಳ್ಳುತ್ತಿದ್ದಾಳೆ. ಮಹಿಳಾ ದೌರ್ಜನ್ಯಗಳು ಇನ್ನೂ ನಡೆಯುತ್ತಿವೆ. ಇಂಥ ಶೋಷಣೆಗಳಿಗೆ ವಿದಾಯ ಹಾಡುವ ಕಾಲ ಬರಬೇಕು. ಅದಕ್ಕಾಗಿ ಸಂಘಟಿತ ಹೋರಾಟವೂ ಬೇಕು. ಪ್ರತಿ ಮನೆಯಿಂದ ಸೌಹಾರ್ದ ಜೀವನ ವಿಧಾನ ಆರಂಭವಾಗಿ ಸಾಮಾಜಿಕ ಸೌಖ್ಯ ಕಾಣಬೇಕು. ಇದಕ್ಕಾಗಿ ಮಹಿಳೆ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಸಬಲೀಕರಣ ಹಾಗೂ ಸಮಾನತೆಯ ಹೆಸರಿನಲ್ಲಿ ಕಾನೂನಿನ ದುರುಪಯೋಗವೂ ಸಲ್ಲದು ಎಂದರು.
ಹಾವೇರಿ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಪುಷ್ಪಾ ಶಲವಡಿಮಠ ಮಾತನಾಡಿ, ಮಹಿಳೆಯರಲ್ಲಿ ತಾಳ್ಮೆ ಗುಣ ಇಳಿಮುಖವಾಗುತ್ತಿದೆ. ಮಹಿಳೆಯರಲ್ಲಿ ಅಂತಃಶಕ್ತಿ, ಇಚ್ಛಾಶಕ್ತಿ, ಸಹನಶೀಲತೆ ಇನ್ನೂ ಬೆಳೆಯಬೇಕಾಗಿದೆ. ಮಹಿಳೆ ಬದುಕಿನುದ್ದಕ್ಕೂ ಬೇರೆಯವರ ಆಶ್ರಯದಲ್ಲಿಯೇ ಬೆಳೆಯುತ್ತಿರುವುದರಿಂದ ಸ್ವಾತಂತ್ರ್ಯದ ಕೊರತೆ ಎದುರಾಗಿದೆ. ಈಗ ಮಹಿಳೆಯರನ್ನು ವೈಚಾರಿಕವಾಗಿ ಬೆಳೆಸುವ ಅಗತ್ಯವಿದೆ. ಇದು ಜಾಗತಿಕ ಸಮಸ್ಯೆ. ಕುಟುಂಬ ಸುರಕ್ಷಿತ ತಾಣ ಎಂದಾದರೂ ತಂದೆಯೇ ಮಗಳ ಮೇಲೆ ಅಮಾನವೀಯ ದೌರ್ಜನ್ಯ ಮಾಡುತ್ತಿರುವ ಘಟನೆಗಳು ವಿಷಾದಕರ ಎಂದರು.
ಚಿಂತಕಿ ವಾಸಂತಿ ಪ್ರಭಾಕರ ನಾಯಕ ಮಾತನಾಡಿ, ಮಹಿಳೆಯರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಮಾಜ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಲಾಗುತ್ತದೆ. ಅದರೊಂದಿಗೆ ಸಮಾನತೆಯನ್ನೂ ನೀಡುವ ಅಗತ್ಯವಿದೆ. ಜಾನಪದ ಮಹಿಳೆ ತನ್ನ ಕಲಾವಂತಿಕೆ ಮೂಲಕ ತನ್ನ ಬದುಕನ್ನು ರೂಪಿಸಿಕೊಂಡಳು. ಅದರೊಂದಿಗೆ ತನ್ನ ನೋವು ನಲಿವುಗಳನ್ನು ಹಂಚಿಕೊಂಡಳು. ಪುರುಷ ಮಹಿಳೆ ಪರಸ್ಪರ ಸಹಕಾರದಿಂದ ಬದುಕುತ್ತಿದ್ದರು. ಇಂದು ಬದಲಾದ ಕಾಲದಲ್ಲಿ ಸಂಸ್ಕೃತಿ ಮರೆಯಬಾರದು ಎಂದರು.
ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷೆ ವಿಜಯಲಕ್ಷ್ಮೀ ಗುಡಗುಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಎಂ. ಉದಾಸಿ, ಸಾಹಿತಿ ಮಾರುತಿ ಶಿಡ್ಲಾಪುರ, ವಿಜಯಕಾಂತ ಪಾಟೀಲ, ಜಿಪಂ ಮಾಜಿ ಅಧ್ಯಕ್ಷೆ ಶಾರದಾ ಹಾದಿಮನಿ, ಕವಯಿತ್ರಿ ಪಾರ್ವತಿಬಾಯಿ ಕಾಶೀಕರ ಇದ್ದರು. ವಿಜಯಕ್ಕ ಕಬ್ಬೂರ ಪ್ರಾರ್ಥಿಸಿದರು. ಅಕ್ಕಮ್ಮ ಕುಂಬಾರಿ ಸ್ವಾಗತಿಸಿದರು. ಲಕ್ಷ್ಮೀ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಡಾ. ವಿಜಯಾ ಕುಲಕರ್ಣಿ ಪರಿಚಯಿಸಿದರು. ನಿರ್ಮಲಾ ಹೊಳಲದ ಹಾಗೂ ಕೆ. ರೂಪಾ ಕಾರ್ಯಕ್ರಮ ನಿರ್ವಹಿಸಿದರು. ಪುಷ್ಪಾ ಬಸ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement