ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಂಭಾಪುರಿ ಶ್ರೀಗಳ ಅದ್ಧೂರಿ ಅಡ್ಡಪಲ್ಲಕ್ಕಿ ಉತ್ಸವ

Lingaraj Badiger
Updated On : 10 Mar 2014, 11:14 am

ಶಿಗ್ಗಾಂವಿ: ಪಟ್ಟಣದ ವಿರಕ್ತಮಠದ ಲಿಂ. ಸಂಗನಬಸವ ಶ್ರೀಗಳ ಪುಣ್ಯಾರಾಧನೆ ನಿಮಿತ್ತ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದ ರವರ ಅಡ್ಡಪಲ್ಲಕ್ಕಿ ಮಹೋತ್ಸವ ಗುರು ಪರಂಪರೆಯ ಸಕಲ ಬಿರುದಾವಳಿಗಳೊಂದಿಗೆ ಭಾನುವಾರ ವಿಧ್ಯುಕ್ತವಾಗಿ ನೆರವೇರಿತು.
ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ವೀರಗಾಸೆ, ಡೊಳ್ಳು ಕುಣಿತ, ಭಜನೆ ಸೇರಿದಂತೆ ವಿವಿಧ ವಾದ್ಯ ವೃಂದಗಳು ಪಾಲ್ಗೊಂಡಿದ್ದವು. ಹಳೆ ಬಸ್ ನಿಲ್ದಾಣ, ಈಶ್ವರ ದೇವಸ್ಥಾನದ ಮೂಲಕ ಪಟ್ಟಣದ ರಾಜಬೀದಿಯಲ್ಲಿ ಸಾಗಿ ವೀರಕ್ತಮಠಕ್ಕೆ ಬಂದು ತಲುಪಿತು. ಮೆರವಣಿಗೆ ಉದ್ದಕ್ಕೂ ಜಗದ್ಗುರು ಪಂಚಾಚಾರ್ಯ ಮಹಾರಾಜಕೀ ಜೈ ಎಂಬ ಮಂತ್ರಘೋಷಗಳು ಪಟ್ಟಣದ ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸಿದವು. ಮೆರವಣಿಗೆಯಲ್ಲಿ ವಿಶೇಷವಾಗಿ ಮಹಿಳೆಯರ ಡೊಳ್ಳು ಕುಣಿತ ಸೇರಿದ್ದ ಜನಸ್ತೋಮದ ಗಮನ ಸೆಳೆಯಿತು. ಬಳಿಕ ವಿರಕ್ತಮಠದಲ್ಲಿ ಧರ್ಮ ಜಾಗೃತಿ ಸಮಾರಂಭ ಜರುಗಿತು.
ಅಡ್ಡ ಪಲ್ಲಕ್ಕಿ ಉತ್ಸವದ ಪೂರ್ವದಲ್ಲಿ ಪಟ್ಟಣದ ಹೊರವಲಯದಲ್ಲಿರುವ ಪರಿವೀಕ್ಷಣ ಮಂದಿರದ ಬಳಿ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದವರ ಪುರ ಪ್ರವೇಶವಾಯಿತು. ಜಗದ್ಗುರುಗಳನ್ನು ಬೈಕ್ ರ್ಯಾಲಿಯ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆ ಉದ್ದಕ್ಕೂ ವಿರಕ್ತಮಠದ ಸಂಗನಬಸವ ಸ್ವಾಮಿಗಳು, ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯರು, ಶಾಸಕ ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಜಿಪಂ ಸದಸ್ಯ ಬಿ.ಟಿ. ಇನಾಮತಿ, ಸಿ.ಎಸ್. ಪಾಟೀಲ, ಜಗದೀಶ ಕುಲಕರ್ಣಿ, ಮಹೇಶ ಸಾಲಿಮಠ, ಶ್ರೀಕಾಂತ ದುಂಡಿಗೌಡ್ರ ಇತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement