ವಿದ್ಯಾರ್ಥಿಗಳು ಸಮಯ ಸದುಪಯೋಗ ಪಡಿಸಿಕೊಳ್ಳಿ
ಹಾನಗಲ್ಲ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ಸಮೂಹ ಅನಾವಶ್ಯಕ ಕಾಲಹರಣ ಮಾಡದೇ ಕಠಿಣ ಪರಿಶ್ರಮ ವಹಿಸಿ ಜ್ಞಾನಾರ್ಜನೆಯಲ್ಲಿ ತೊಡಗುವ ಮೂಲಕ ಅಮೂಲ್ಯ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಶಿಕ್ಷಕ ವಿಷ್ಣು ಪಟಗಾರ ಕರೆ ನೀಡಿದರು.
ಹಾನಗಲ್ಲ ತಾಲೂಕಿನ ಶಾಡಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿನ ಪ್ರತಿ ನಿಮಿಷವೂ ಅಮೂಲ್ಯವಾದುದಾಗಿದೆ. ಮಾರ್ಗಸೂಚಿಯನ್ನು ಇಟ್ಟುಕೊಂಡು ಸಮಯದ ಸದ್ಭಳಕೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಸರ್ಕಾರಿ ಶಾಲೆಗಳು ಸಹ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ತೀವ್ರ ಪೈಪೋಟಿ ನೀಡಲಾರಂಭಿಸಿವೆ. ಉನ್ನತ ಹುದ್ದೆಗಳಿಗೆ ಆಯ್ಕೆಯಾದವರಲ್ಲಿ ಬಹುಸಂಖ್ಯಾತರು ಸರ್ಕಾರಿ ಶಾಲೆಗಳಲ್ಲಿಯೇ ಅಭ್ಯಸಿಸಿದವರು ಎನ್ನುವುದು ಗಮನಾರ್ಹ ಸಂಗತಿ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಬಗೆಗಿನ ಕೀಳರಿಮೆ ಹೋಗಲಾಡಿಸುವ ಅಗತ್ಯವಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ ಸಾವಕ್ಕನವರ ಮಾತನಾಡಿದರು. ಪರಮೇಶಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಜಯಮ್ಮ ಪಾಟೀಲ, ತಾಪಂ ಸದಸ್ಯ ಸುಭಾಸ ಓಲೇಕಾರ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಕಾಂತ ಸಾವಕ್ಕನವರ, ಚನ್ನವೀರಪ್ಪ ಬಂಕಾಪೂರ, ಚಂದ್ರಗೌಡ ಪಾಟೀಲ, ರಾಜೂ ಮಲಗುಂದ ಮುಂತಾದವರು ಇದ್ದರು.