ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಧಿಕಾರಿಗಳ ನಿರ್ಲಕ್ಷ್ಯ: ಪಶು ಔಷಧಿ ನೆಲದ ಪಾಲು

Lingaraj Badiger
Updated On : 11 Mar 2014, 11:55 am

ಹಾವೇರಿ: ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಗೂ ಸವಣೂರು ತಾಲೂಕಿನ ತವರಮಳ್ಳಳ್ಳಿ, ಸವೂರು ಸುತ್ತಮುತ್ತ ಪಶುಗಳಿಗೆ ನೀಡುವ ಜಂತು ನಾಶಕ ಔಷಧಿಗಳ ಬಾಟಲ್‌ಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಐವರ್ ಮ್ಯಾಕ್ಸಿನ್ ಓರಲ್ ಏಲ್ಯೂಶನ್ ಕಂಟೆಂಟ್ ಎಂಬ ಹೆಸರಿನ ಈ ಔಷಧಿ ಇಲಾಖೆಯಲ್ಲಿ ಅತ್ಯಗತ್ಯವಾದ ಹಾಗೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುವ ಔಷಧಿ ಎಂದು ಹೇಳಲಾಗುತ್ತಿದೆ. ಕುರಿ, ಕೋಳಿ, ಎತ್ತು, ಆಕಳು, ಎಮ್ಮೆ, ಕುದುರೆ ಹೀಗೆ ಯಾವುದೇ ರೀತಿಯ ಪ್ರಾಣಿ ಮತ್ತು ಜಾನುವಾರಿಗೆ ಕಾಡುವ ಜಂತುರೋಗ ಹತೋಟಿಗೆ ಈ ಔಷಧಿ ಬಳಕೆ ಮಾಡಲಾಗುತ್ತದೆ. ಇದನ್ನು ಪಶುಪಾಲನಾ ಇಲಾಖೆ ಮೂಲಕ ಜಾನುವಾರಿಗೆ ಉಚಿತವಾಗಿ ನೀಡಲಾಗುತ್ತದೆ. ಈ ಔಷಧಿ ಬಳಕೆ ಅವಧಿ 2013ರ ಫೆಬ್ರವರಿಯಲ್ಲಿ ಮುಗಿದಿದೆ. ನಿಗದಿತ ಅವಧಿಯಲ್ಲಿ ಈ ಔಷಧಿಯನ್ನು ಬಳಸಲು ಸಾಧ್ಯವಾಗದ ಕಾರಣ. ಇಲಾಖೆಯವರೇ ಈ ಔಷಧಿಯನ್ನು ರಸ್ತೆ ಬದಿ ಎಸೆದು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಎರಡು ಪೆಟ್ಟಿಗೆಯಲ್ಲಿರುವ ಒಂದು ಲೀಟರ್ ಅಳತೆಯ ನೂರಕ್ಕೂ ಹೆಚ್ಚು ಬಾಟಲಿಗಳನ್ನು ಬಳಕೆ ಮಾಡದೇ ಬೇಕಾಬಿಟ್ಟಿಯಾಗಿ ಎಸೆದು ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಂತು ನಾಶಕವಾಗಿ ಬಳಸುವ ಈ ಔಷಧಿ ಬಾಟಲ್‌ಗಳು ಎಲ್ಲಿಂದ ಬಂದಿವೆ, ಯಾರು ಎಸೆದಿದ್ದಾರೆ ಎಂಬುದು ಗೊತ್ತಾಗಿಲ್ಲ. ಬಾಟಲ್‌ಗಳ ಮೇಲೆ ಪಶುಪಾಲನೆ ಮತ್ತು ಪಶು ಸೇವಾ ಇಲಾಖೆ ಕರ್ನಾಟಕ ಸರ್ಕಾರ ಎಂದಿದ್ದು, ಉಚಿತ ವಿತರಣೆಗೆ ಎಂದಿದೆ.
ಇದುವರೆಗೆ ಔಷಧಿಯನ್ನು ಬಳಕೆ ಮಾಡದೆ ಅವಧಿ ಮುಗಿದ ತಕ್ಷಣ ಹೊಲದಲ್ಲಿ, ರಸ್ತೆ ಪಕ್ಕದಲ್ಲಿ ಹೀಗೆ ಎಲ್ಲಿ ಬೇಕೆಂದರಲ್ಲಿ ಬಿಸಾಡಿ ಹೋಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಿಯಮದ ಪ್ರಕಾರ ಅವಧಿ ಮುಗಿದ ಔಷಧಿಗಳನ್ನು ಬೇಕಾಬಿಟ್ಟಿಯಾಗಿ ಎಸೆಯುವಂತಿಲ್ಲ. ಸರ್ಕಾರದಿಂದ ಪಶು ಚಿಕಿತ್ಸೆಗಾಗಿ ಹಾಗೂ ರೋಗ ನಿವಾರಣೆಗೆ ನೀಡುರುವ ಔಷಧಿಗಳನ್ನು ಇದು ವರೆಗೆ ಉಪಯೋಗಿಸದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಈ ಕುರಿತು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಔಷಧಿ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಆಯಾ ಇಲಾಖೆ ಅಧಿಕಾರಿಗಳ ಕರ್ತವ್ಯ. ಕುರಿ, ಜಾನುವಾರು ಹಲವು ರೋಗಗಳಿಗೆ ತುತ್ತಾಗುತ್ತಿದ್ದರೂ ಸರ್ಕಾರದಿಂದ ಬಂದ ಉಚಿತ ಔಷಧಿಯನ್ನು ಉಪಯೋಗಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement