ಕಳ್ಳರ ಭಯದಲ್ಲಿ ಹಳೇಮಣ್ಣೂರು ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ, ಗುತ್ತಲ, ಮಾ. 10
ಇಬ್ಬರು ಅಪರಿಚಿತ ವ್ಯಕ್ತಿಗಳು 10 ದಿನಗಳಿಂದ ಗ್ರಾಮಕ್ಕೆ ತಡರಾತ್ರಿ ಆಗಮಿಸಿ, ಮನೆಗಳಿಗೆ ನುಗ್ಗಿ ಕುಟುಂಬದ ಜನರಿಗೆ ಇಲ್ಲದ ಮಾನಸಿಕ ಹಿಂಸೆ ನೀಡಿ ಪರಾರಿಯಾಗುತ್ತಿರುವ ಆತಂಕಕಾರಿ ಘಟನೆ ಸಮೀಪದ ಹಳೆಮಣ್ಣೂರು ಗ್ರಾಮದಲ್ಲಿ ನಡೆಯುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ಗ್ರಾಮಸ್ಥರು ಅಕ್ಷರಶಃ ಭಯಭೀತರಾಗಿದ್ದಾರೆ.
ವರದಾ ನದಿ ಪ್ರವಾಹ ಪೀಡಿತ ಪ್ರದೇಶವಾದ ಮಣ್ಣೂರು ಗ್ರಾಮವನ್ನು 2011ರಲ್ಲಿ ಸ್ಥಳಾಂತರ ಮಾಡಲಾಗಿತ್ತು. ಸ್ಥಳಾಂತರ ಮಾಡಿದ ಸ್ಥಳಕ್ಕೆ ಟಾಟಾ ಮಣ್ಣೂರು ಗ್ರಾಮವೆಂದು ನಾಮಕರಣ ಮಾಡಿದ್ದು, ಗ್ರಾಮದಿಂದ 120 ಕುಟುಂಬಗಳು ಟಾಟಾ ಮೆಟಾಲಿಕ್ ಮಣ್ಣೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿವೆ.
ನಿದ್ರೆಯಿಲ್ಲ: ಅನಾನುಕೂಲತೆಯಿಂದ ಹಳೆ ಮಣ್ಣೂರು ಗ್ರಾಮದಲ್ಲಿ ಸದ್ಯ 20 ಕುಟುಂಬಗಳ ಸುಮಾರು 75 ಜನ ವಾಸಿಸುತ್ತಿದ್ದಾರೆ. ಆದರೆ, ಮಹಾ ಶಿವರಾತ್ರಿ ದಿವಸದಿಂದ ಇಲ್ಲಿ ವಾಸ ಮಾಡುತ್ತಿರುವ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ರಾತ್ರಿ 11 ಗಂಟೆಯಾದರೆ ಕೈಯಲ್ಲಿ ಜೀವ ಹಿಡಿದುಕೊಂಡೇ ಇರಬೇಕಾದ ಪರಿಸ್ಥಿತಿ ಬಂದಿದೆ. ರಾತ್ರಿಯಿಡಿ ನಿದ್ರಿಸದೇ ಆ ಇಬ್ಬರು ಆಗಂತುಕ ವ್ಯಕ್ತಿಗಳಿಂದ 10 ದಿನಗಳಿಂದ ಭಯದ ವಾತಾವರಣದಲ್ಲಿ ಕಾಲ ನೂಕುತ್ತಿದ್ದಾರೆ.
ಮಹಾಶಿವರಾತ್ರಿಯಂದು ಗ್ರಾಮದ ನಿಂಗಪ್ಪ ಸಿದ್ದಾಪುರ ಅವರ ಮನೆಯ ಮುಚ್ಚಿದ ಕದವನ್ನು ಚಾಣಾಕ್ಷ್ಯತನದಿಂದ ಕಳ್ಳರು ತೆಗೆದು ಒಳಗೆ ನುಗ್ಗಿದ್ದಾರೆ. ಇವರು ಗ್ರಾಮ ಪ್ರವೇಶಿಸುತ್ತಿದ್ದಂತೆ ಶ್ವಾನಗಳು ಬೊಗಳಲು ಪ್ರಾರಂಭಿಸಿವೆ. ಎಚ್ಚೆತ್ತುಕೊಂಡ ನಿಂಗಪ್ಪ ಅವರ ಪತ್ನಿ ಪತಿಯನ್ನು ಎಬ್ಬಿಸಿದ್ದಾರೆ. ಅದು ಮಾಮೂಲಿ ಎಂದು ಹೇಳಿ ಮತ್ತೆ ಮಲಗಿದ್ದಾರೆ. ಆದರೆ, ಆ ವ್ಯಕ್ತಿಗಳು ಇವರ ಮನೆ ಬಾಗಿಲಿಗೆ ಬಂದಿದ್ದಾರೆ ಎಂಬ ಅರಿವು ಆ ದಂಪತಿಗಳಿಗಿಲ್ಲ.
ಕಲ್ಲು ಎಸೆದು ಪರಾರಿ: ಆದರೆ, ಪತ್ನಿಗೆ ಮಾತ್ರ ನಿದ್ರೆ ಹತ್ತಿರಲಿಲ್ಲ. ಮತ್ತೆ ಆ ವ್ಯಕ್ತಿಗಳು ಕದವನ್ನು ನಾಜೂಕಾಗಿ ತೆಗೆಯುತ್ತಿದ್ದ ಸದ್ದು ಕೇಳಿಸಿದೆ. ಇಲಿಗಳ ಸಪ್ಪಳವೆಂದು ಮತ್ತೆ ಗಂಡನನ್ನು ಎಬ್ಬಿಸಿದ್ದಾಳೆ. ಎಬ್ಬಿಸುವಷ್ಟರಲ್ಲಿ ಮನೆ ಒಳಗೆ ಈ ಇಬ್ಬರು ಮಹಾಶಯರು ಪ್ರತ್ಯಕ್ಷರಾಗಿದ್ದಾರೆ. ಗದ್ದಲವಾಗುತ್ತಿದ್ದಂತೆ ಕೈಯಲ್ಲಿನ ಕಲ್ಲನ್ನು ನಿಂಗಪ್ಪ ಅವರತ್ತ ಎಸೆದು ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಎರಡು ದಿನಕ್ಕೊಮ್ಮೆ ಈ ವ್ಯಕ್ತಿಗಳು ಗ್ರಾಮಕ್ಕೆ ನುಗ್ಗಿ ಇಲ್ಲಿವರೆಗೂ 5 ಮನೆಗಳಿಗೆ ದಾಳಿ ನಡೆಸಿದ್ದಾರೆ. ಆದರೆ, ಯಾವ ಮನೆಯಲ್ಲಿ ಕಳ್ಳತನವಾದ ವರದಿಯಾಗಿಲ್ಲ. ಕಳೆದ 8-10 ದಿನಗಳ ಹಿಂದೆಯೇ ಉಪ ಠಾಣೆ ಹೊಸರಿತ್ತಿಗೆ ಮಣ್ಣೂರು ಗ್ರಾಮಸ್ಥರು ದೂರು ನೀಡಿದ್ದಾರೆ. ಪ್ರತಿದಿನ ರಾತ್ರಿ ದಿನಕ್ಕೊಬ್ಬರಂತೆ ಹೊಸರಿತ್ತಿ ಪೊಲೀಸರು ಮಣ್ಣೂರು ಗ್ರಾಮಕ್ಕೆ ಬಂದು ಹೋಗುತ್ತಿದ್ದು ಇನ್ನೂವರೆಗೂ ಆ ಅಪರಿಚಿತ ಆಗಂತುಕ ವ್ಯಕ್ತಿಗಳು ಸಿಗದೇ ಇರುವುದರಿಂದ ಸಾರ್ವಜನಿಕರಲ್ಲಿ ಭಯ ಮುಂದುವರಿದಿದೆ.
ಆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನು ಕೆಂಪಗಿದ್ದು, ಎತ್ತರವಾಗಿದ್ದಾನೆ. ಅಲ್ಲದೆ, ದಷ್ಟಪುಷ್ಟನಾಗಿದ್ದಾನೆ. ಇನ್ನೊಬ್ಬ ಸಾದಾ ಮೈಕಟ್ಟಿನವನಾಗಿ ಕಪ್ಪಾಗಿ ಸ್ವಲ್ಪ ಕುಳ್ಳನಾಗಿದ್ದಾನೆ. ಅಲ್ಲದೆ, ಇವರಿಬ್ಬರು ಕರಿಚಡ್ಡಿ ಮತ್ತು ಕರಿ ಬನಿಯನ್ ಧರಿಸಿರುತ್ತಾರೆ ಎಂದು ಸಾರ್ವಜನಿಕರಿಂದ ತಿಳಿದು ಬಂದಿದೆ.
ಭಯದಲ್ಲಿ ಗ್ರಾಮಸ್ಥರು: 10 ದಿನಗಳಿಂದ ರಾತ್ರಿ ಮತ್ತು ಹಗಲು ಒಂದೇ ಆಗಿದೆ. ರಾತ್ರಿ ನಿದ್ರಿಸುವ ಹಾಗಿಲ್ಲ. ಮಕ್ಕಳು ಮರಿ ಕಟ್ಟಿಕೊಂಡು ಜೀವನ ಸಾಗಿಸುವುದಾದರೂ ಹೇಗೆ? ಇವರು ಏತಕ್ಕಾಗಿ ನಮ್ಮ ಗ್ರಾಮಕ್ಕೆ ಬರುತ್ತಾರೆ. ಯಾವ ಹೊತ್ತಿನಲ್ಲಿ ನಮಗೆ ಏನು ಮಾಡುತ್ತಾರೆ ಎಂಬ ಭಯ ನಮ್ಮಲ್ಲಿ ಮೂಡಿದೆ ಎನ್ನುತ್ತಾರೆ ಗ್ರಾಮಸ್ಥರು. ರಾತ್ರಿ ಹೊತ್ತು ನಾವು ಎಚ್ಚರ ತಪ್ಪಿದ್ದರೆ ಏನೆಲ್ಲಾ ಅನಾಹುತವಾಗುತ್ತದೆಯೋ ದೇವರೇ ಬಲ್ಲ. ಅವರನ್ನು ಬೆನ್ನು ಹತ್ತಿದ ನನ್ನ ಮೇಲೆ ಕಲ್ಲು ಹೊಡೆದು ಓಡಿ ಹೋದರು ಎಂದು ಭಯದಿಂದಲೇ ನಿಂಗಪ್ಪ ಸಿದ್ದಾಪುರ ಪತ್ರಿಕೆಗೆ ತಿಳಿಸಿದರು.
ಗ್ರಾಮಸ್ಥರು ಈ ಘಟನೆಗಳಿಂದ ದಿನದಿಂದ ದಿನಕ್ಕೆ ಭಯಭೀತರಾಗುತ್ತಿದ್ದಾರೆ. ಕೂಡಲೇ ಗ್ರಾಮಕ್ಕೆ ರಾತ್ರಿ ಹೊತ್ತು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ, ಆ ವ್ಯಕ್ತಿಗಳನ್ನು ಶೀಘ್ರದಲ್ಲಿಯೇ ಬಂಧಿಸಬೇಕೆಂದು ಗ್ರಾಮಸ್ಥರಾದ ರಮೇಶ ಮಡ್ಲೂರ, ಫಕ್ಕೀರಪ್ಪ ಕಮತದ, ಶಂಭು ಮರಳಿಹಳ್ಳಿ, ಮುತ್ತಣ್ಣ ಮಡ್ಲೂರ ಆಗ್ರಹಿಸಿದ್ದಾರೆ.
ಹತ್ತು ದಿನಗಳಿಂದ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸುವ ಈ ವ್ಯಕ್ತಿಗಳು ಇನ್ನೂವರೆಗೂ ಗ್ರಾಮದಲ್ಲಿ ಒಂದು ಕಳುವು ಮಾಡಿಲ್ಲ. ಇವರು ಯಾವ ಕಾರಣಕ್ಕಾಗಿ ತಡರಾತ್ರಿಯಲ್ಲಿ ಸಾರ್ವಜನಿಕರಿಗೆ ಈ ರೀತಿ ಬಂದು ತೊದರೆಕೊಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ರಾತ್ರಿ ವೇಳೆಯಲ್ಲಿ ಗ್ರಾಮಕ್ಕೆ ಪೊಲೀಸ್ ರಕ್ಷಣೆ ನೀಡಲಾಗುತ್ತಿದ್ದು, ಆ ವ್ಯಕ್ತಿಗಳ ಹುಡುಕಾಟದಲ್ಲಿ ತೊಡಗಿದ್ದೇವೆ ಎಂದು ಹೊಸರಿತ್ತಿ ಪಿಎಸ್‌ಐ ಗೌಡಪ್ಪಗೌಡ ತಿಳಿಸಿದ್ದಾರೆ.