ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆಗುರುಗಳ ಸೇವೆ ಅನನ್ಯ: ಶ್ರೀಗಳು
ಹಾವೇರಿ: ವಿದ್ಯಾರ್ಥಿಗಳ ಬದುಕಿನಲ್ಲಿ ಗುರುವಿಗೆ ವಿಶೇಷ ಸ್ಥಾನ. ಹೀಗಾಗಿ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಹೋಲಿಸಲಾಗಿದೆ. ಇಂತಹ ಸ್ಥಾನ ಪಡೆದ ಗುರುಗಳೇ ಧನ್ಯರು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಗುರುಗಳ ಸೇವೆ ಅನನ್ಯ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀಗಳು ಹೇಳಿದರು.
ನಗರದ ಹೊರವಲಯದಲ್ಲಿರುವ ಧಾರವಾಡ ಕವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಈಚೆಗೆ ನಡೆದ ಪ್ರೊ. ಎಸ್.ವಿ. ಅಯ್ಯನಗೌಡರ ರಚಿತ ಕರ್ನಾಟಕಕ್ಕೆ ವಿವಿಧ ಧರ್ಮಗಳ ಸಾಂಸ್ಕೃತಿಕ ಕೊಡುಗೆ ಪುಸ್ತಕ ಬಿಡುಗಡೆ ಹಾಗೂ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಡಾ.ಅಯ್ಯನಗೌಡರ ಗುರುಗಳು ಕಾಯಕದಲ್ಲಿ ಕೈಲಾಸ ಕಂಡವರು. ಮನುಷ್ಯ ಒಂದೇ ದಿನ ಬದುಕಿದರೂ ಅರ್ಥಪೂರ್ಣವಾಗಿ ಬದುಕಬೇಕು. ಅಂತಹ ಬದುಕು ಸಾಗಿಸಿದ ಮಹಾನ್ ಚೇತನ ಅಯ್ಯನಗೌಡರು ಎಂದು ಬಣ್ಣಿಸಿದರು.
ಕನ್ನಡ ವಿಭಾಗದ ಸಹಾಯಕ ಅಧ್ಯಾಪಕ ಡಾ. ನಿಂಗಪ್ಪ ಮುದೇನೂರ ಮಾತನಾಡಿ, ಅಯ್ಯನಗೌಡರ ಗುರುಗಳ ಜೀವನ ಶೈಲಿ, ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಟಿ.ಎಂ. ಭಾಸ್ಕರ್ ಮಾತನಾಡಿ, ಅಯ್ಯನಗೌಡರ ಉತ್ತಮ ಪ್ರಾಧ್ಯಾಪಕರಾಗಿ, ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ ನಾಲ್ಕು ದಶಕಗಳ ಕಾಲ ಉತ್ತಮ ಬೋಧನಾ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪರ ರೇಣುಕಾ ಕಹಾರ, ಸಿದ್ದೇಶ್ವರ ಜೋಗಿ, ಗುರುರಾಜ ಶಿರಹಟ್ಟಿ, ಸಹಾಯಕ ಅಧ್ಯಾಪಕ ಡಾ. ವಿಶ್ವನಾಥ ಚಿಂತಾಮಣಿ ಮಾತನಾಡಿದರು. ಡಾ. ಅಯ್ಯನಗೌಡರ ದಂಪತಿಯನ್ನು ಕೇಂದ್ರದ ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಬಳಗದಿಂದ ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ವಿ.ಎಸ್. ಕೆಲೂರ, ಎಲ್.ಎಸ್. ಪಾಟೀಲ, ಸದಾಶಿವ ಹಾದಿಮನಿ, ಎಸ್.ಎಸ್. ಆಧೋನಿ, ಜ್ಯೋತಿ ಇತರರು ಇದ್ದರು. ಡಾ. ಲಿಂಗರಾಜ ಪಾಟೀಲ ಸ್ವಾಗತಿಸಿದರು. ಕೀರ್ತಿವರ್ಮ ಪಾಣಿಗಟ್ಟಿ ನಿರೂಪಿಸಿದರು. ಉಪನ್ಯಾಸಕ ಮೌನೇಶ ಬಡಿಗೇರ ವಂದಿಸಿದರು.