ಸಾಹಿತಿಗಳಿಗೆ ದೊಡ್ಡ ಘಟನೆ ಎನಿಸದ ಸ್ವಾತಂತ್ರ್ಯ ಸಂಗ್ರಾಮ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 10
ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಹಿತಿಗಳ ಕೊಡುಗೆಯೇನು ಎಂದು ಪ್ರಶ್ನಿಸುವವರಿಗೆ ಹೇಳಲು ನಮ್ಮಲ್ಲಿ ಉತ್ತರವಿಲ್ಲ. ಅಂದು ಪ್ರಚಲಿತದಲ್ಲಿದ್ದ ಕುವೆಂಪು, ಬೇಂದ್ರಯಂತಹ ಮಹಾನ್ ಸಾಹಿತಿಗಳಿಗೂ ಇದೊಂದು ದೊಡ್ಡ ಘಟನೆ ಎನಿಸದಿರುವುದು ನನ್ನಲ್ಲಿ ದೊಡ್ಡ ಕೊರಗನ್ನು ಹುಟ್ಟುಹಾಕಿದೆ ಎಂದು ಸಾಹಿತಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ರಂಗ ಮಂದಿರದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಆಂಜನೇಯ ಯುವಕ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ತಾಲೂಕು ಚುಟುಕು ಸಾಹಿತ್ಯ ಪರಿಷತ್ನ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾತ್ಸಾರ: ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಪ್ರಾಣತ್ಯಾಗ ಮಾಡಿದ ಅದೆಷ್ಟೋ ವೀರರು ಬೆಳಕಿಗೆ ಬಾರದೇ ಹೋಗಿದ್ದಾರೆ. ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ತಾತ್ಸಾರ ತೋರುತ್ತಿರುವ ಸಾಹಿತಿಗಳಿಗೆ ಯಾವ ಪದಗಳನ್ನು ಬಳಕೆ ಮಾಡಲು ಸಾಧ್ಯ. ಬೇಂದ್ರೆ, ಕುವೆಂಪು ಕೂಡ ಇದಕ್ಕೆ ಹೊರತಾಗಿಲ್ಲ ಎಂದರು.
ಸುಮಾರು 30 ದಶಕಗಳ ಸುದೀರ್ಘ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ದೇಶವನ್ನು ಮುಕ್ತಗೊಳಿಸಬೇಕೆಂದು ನಮ್ಮ ಸಾಹಿತಿಗಳಿಗೆ ಅನ್ನಿಸಲಿಲ್ಲವೇ? ಸ್ವಾತಂತ್ರ್ಯ ಹೋರಾಟದ ಯಾವೊಂದು ಘಟನೆ ಕೂಡ ಸಾಹಿತಿಗಳನ್ನು ಪ್ರೇರೇಪಿಸಲಿಲ್ಲವೇ ಎಂದು ಪ್ರಶ್ನಿಸಿದರು. ಹೋರಾಟದ ಘಟನೆ ಮುಂದಿಟ್ಟುಕೊಂಡು ಮಹಾಕಾವ್ಯವೊಂದನ್ನು ರಚಿಸಿದ್ದಿದ್ದರೆ ಹೋರಾಟಗಾರರಷ್ಟೇ ಬೆಲೆ ಇವರಿಗೂ ಬರುತ್ತಿತ್ತು ಎಂದರು.
ಸಂತೈಸುವವರು ಸಾಹಿತಿಗಳಲ್ಲ: ಆತ್ಮ ತೃಪ್ತಿಗೋಸ್ಕರ ಅಥವಾ ಇನ್ನಾರನ್ನೋ ಸಂತೈಸುವ ಉದ್ದೇಶದಿಂದ ಇಲ್ಲವೇ ಯಾವುದೋ ಪ್ರಶಸ್ತಿಯನ್ನು ದೃಷ್ಟಿಕೋನವನ್ನಿಟ್ಟುಕೊಂಡು ಸಾಹಿತಿಗಳಾಗುವವರನ್ನು ಒಪ್ಪಲು ಸಾಧ್ಯವಿಲ್ಲ. ಇಂತಹವರ ಸಾಹಿತ್ಯ ಜನರ ಮನಸ್ಸನ್ನೂ ಮುಟ್ಟುವುದಿಲ್ಲ. ಆತ್ಮಶುದ್ಧಿಯೊಂದಿಗೆ ಸಮಾಜದ ಕಲ್ಯಾಣಕ್ಕಾಗಿ ರಚಿಸಿದ ಕಾವ್ಯದಿಂದ ಬದಲಾವಣೆ ನಿರೀಕ್ಷಿಸಬಹುದು ಎಂದರು.
ಚುಟುಕು ಸಾಹಿತ್ಯವೆಂದೊಡನೆ ತಾತ್ಸಾರ ಬೇಡ. ಸಮಾಜ ಪರಿವರ್ತನೆ ಮಾಡುವ ಶಕ್ತಿ ಅದಕ್ಕೂ ಇದೆ. ಉತ್ಕಟ ಅಭಿಲಾಷೆ ಹಾಗೂ ಪ್ರೋತ್ಸಾಹ ಸಮ್ಮಿಲನವಾದಾಗ ಮಹಾಕಾವ್ಯ ರಚನೆ ಸಾಧ್ಯ. ಸಾಹಿತಿಗಳು ಆಶಾವಾದಿಗಳಾಗಿರಬೇಕು. ಸಮಾಜದಲ್ಲಾಗುವ ಎಲ್ಲ ಬದಲಾವಣೆ ಮತ್ತು ಅದರಿಂದಾಗುವ ಪರಿಣಾಮಗಳ ಸೂಕ್ಷ್ಮತೆ ಅರಿತಿರಬೇಕು. ಸಾಹಿತಿಗಳು ಓದುವ ಹವ್ಯಾಸವನ್ನು ಹೆಚ್ಚು ಬೆಳೆಸಿಕೊಂಡಾಗ ಮಾತ್ರ ಶಬ್ಧ ಸಂಪತ್ತು ಹೆಚ್ಚಾಗಿ ಅಭಿವ್ಯಕ್ತಿ ಸಾಮರ್ಥ್ಯ ಬರಲಿದೆ ಎಂದರು.
ಬಾಲ್ಯದ ನೆನಪು: ಬ್ಯಾಡಗಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಕ್ಷಣಗಳನ್ನು ನೆನಪಿಸಿಕೊಂಡ ಪಾಪು, ಶಿಕ್ಷಕ ಸವದತ್ತಿ ಅವರನ್ನು ಮನದಲ್ಲಿ ನೆನೆದರು. ಮಹಾತ್ಮ ಗಾಂಧಿ ಇಲ್ಲಿಗೆ ಬಂದಿದ್ದಾಗ ಸ್ವಯಂ ಸೇವಕನಾಗಿದ್ದ ಅವರ ಬೆನ್ನು ಸವರಿದ ಘಟನೆಯನ್ನು ಸ್ಮರಿಸಿಕೊಂಡರು, ಮಾಂಸದ ಮುದ್ದೆಯಂತಿದ್ದ ನನ್ನನ್ನು ಒಬ್ಬ ಮನುಷ್ಯನಾಗಿ ಪರಿವರ್ತಿಸಿದ ಬ್ಯಾಡಗಿಯನ್ನು ಮರೆಯಲು ಸಾಧ್ಯವೇ ಎಂದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕನ್ನಡ ಭಾಷೆ ಸಮೃದ್ಧವಾಗಬೇಕಾದಲ್ಲಿ ಜನರು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇತ್ತೀಚಿನ ಯುವಪೀಳಿಗೆ ಕ್ರಿಯಾಶೀಲತೆಯ ಕೊರತೆಯಿಂದ ಸಾಹಿತ್ಯ ಕೃತಿಯಿಂದ ವಿಮುಖವಾಗುತ್ತಿರುವುದು ದುರಂತ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಕಲಾವಿದ ಹರೀಶ ಮಾಳಪ್ಪನವರ ಪಾಟೀಲ ಪುಟ್ಟಪ್ಪನವರ ಮಣ್ಣಿನ ಶಿಲಾಮೂರ್ತಿ ರಚನೆ ಮಾಡಿದರು.
ಚಿತ್ರನಟ ಆಕಾಶ, ನಿವೃತ್ತ ಪ್ರಾಚಾರ್ಯ ಎಸ್.ಬಿ. ತವರದ, ಚುಸಾಪ ಜಿಲ್ಲಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ, ಹಾವೇರಿ ಕಸಾಪ ಅಧ್ಯಕ್ಷ ವಿ.ಎಂ. ಪತ್ರಿ, ಚುಸಾಪ ತಾಲೂಕಾಧ್ಯಕ್ಷ ಜಮೀರ ರಿತ್ತಿ, ಶಕುಂತಲಾ ದಾಳೇರ, ಸುನಿತಾ ಬಡಿಗೇರ, ಎಂ. ದೀಪಾ, ಎಂ.ಆರ್. ಭದ್ರಗೌಡ್ರ, ವಿಶ್ವನಾಥ ಛತ್ರದ, ತಾರಾ ಬಡಿಗೇರ, ರಮೇಶ ಮೋಟೆಬೆನ್ನೂರ, ಪ್ರಕಾಶ ಛತ್ರದ, ಜಗದೀಶ ಹಾಲನಗೌಡ್ರ, ಗದಿಗಯ್ಯ ಕಾರಿಕಂಠಿಮಠ ಉಪಸ್ಥಿತರಿದ್ದರು. ಶಂಭು ಮಠದ ಸ್ವಾಗತಿಸಿದರು. ವೈ.ಟಿ. ಹೆಬ್ಬಳ್ಳಿ ನಿರೂಪಿಸಿದರು. ಎಂ.ಎಫ್.ಕರಿಯಣ್ಣನವರ ವಂದಿಸಿದರು.